Tuesday, September 17, 2024
Homeರಾಜ್ಯಕಳ್ಳತನ ಪ್ರಕರಣಗಳನ್ನು ಬೇಧಿಸುವ ಜೊತೆ, ನಿಯಂತ್ರಿಸಿ : ಅಧಿಕಾರಿಗಳಿಗೆ ಬಿ.ದಯಾನಂದ ಸೂಚನೆ

ಕಳ್ಳತನ ಪ್ರಕರಣಗಳನ್ನು ಬೇಧಿಸುವ ಜೊತೆ, ನಿಯಂತ್ರಿಸಿ : ಅಧಿಕಾರಿಗಳಿಗೆ ಬಿ.ದಯಾನಂದ ಸೂಚನೆ

B Dayanand

ಬೆಂಗಳೂರು,ಸೆ.6- ಸರಗಳ್ಳತನ, ಮನೆಗಳ್ಳತನ, ವಾಹನಗಳ್ಳತನ ಸೇರಿದಂತೆ ಗಂಭೀರ ಕಳವು ಪ್ರಕರಣಗಳನ್ನು ಬೇಧಿಸುವ ಜೊತೆಗೆ ಕಳವು ನಿಯಂತ್ರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.

ನಗರದ ಸಿಎಆರ್ ನಾರ್ಥ್ ಕವಾಯಿತು ಮೈದಾನದಲ್ಲಿ ಆಯೋಜಿಸಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಸಿಪಿ ಮಟ್ಟದ ಅಧಿಕಾರಿಗಳಿಗೆ ತಮ ವ್ಯಾಪ್ತಿಯ ಅಪರಾಧಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾರಣೀಭೂತರಾದ ಅಂಶಗಳ ನಿಯಂತ್ರಣಕ್ಕೆ ಹಾಗೂ ಪರಿಹಾರೋಪಾಯಗಳು ಏನು ಎಂಬ ವರದಿ ನೀಡಬೇಕೆಂದು ಸೂಚಿಸಿದರು.

ಡಿಸಿಪಿ ನೇತೃತ್ವದಲ್ಲಿ ಅನುಷ್ಠಾನ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಅಪರಾಧ ಪ್ರಕರಣಗಳನ್ನು ಬೇಧಿಸುವುದಷ್ಟೇ ಅಲ್ಲದೆ ನಿಯಂತ್ರಿಸಲು ಕ್ರಮ ವಹಿಸಬೇಕು, ಈಗಾಗಲೇ ನಾವು ಮಾಡಿರುವ ಕೆಲಸಗಳು ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿವೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

ಮಳೆ ನೀರು ಇಂಗು ಗುಂಡಿ:
ಇದೇ ವೇಳೆ ಸಿಎಆರ್ ನಾರ್ಥ್ ಕವಾಯತು ಮೈದಾನದಲ್ಲಿ ಮಳೆ ನೀರು ಕೊಯ್ಲು ಅಂಗವಾಗಿ ಇಂಗು ಗುಂಡಿ ತೋಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮುಂದಿನ ಕೆಲವು ತಿಂಗಳುಗಳಲ್ಲಿ 200ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ಇತರೆ ಪೊಲೀಸ್ ಕಚೇರಿಗಳ ಆವರಣದಲ್ಲಿ ಮಾಡಲಾಗುತ್ತದೆ ಎಂದರು.

ಪೊಲೀಸರು ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಮತ್ತು ಶಾಂತಿ ಕಾಪಾಡುವುದರ ಜೊತೆಗೆ ಪರಿಸರದೊಂದಿಗೆ ಬದ್ದತೆ ತೋರಿಸುತ್ತಿರುವುದು ವಿಶೇಷ. ಸಾರ್ವಜನಿಕ ವಲಯದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.

ಶೂನ್ಯ ತ್ಯಾಜ್ಯ:
ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಈಗಾಗಲೇ ಶೂನ್ಯ ತ್ಯಾಜ್ಯ ಕಚೇರಿಯಾಗಿ ಘೋಷಿಸಲಾಗಿದೆ. ಯಾವ ರೀತಿ ಕಸವನ್ನು ವಿಂಗಡಿಸಬೇಕು, ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಒಂದೂವರೆ ತಿಂಗಳಿನಿಂದ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಇದಕ್ಕೆ ಎನ್ಜಿಒ ಹಾಗೂ ವೇದಾಂತ್ ಟ್ರಸ್ಟ್ ಕೈ ಜೋಡಿಸಿರುವುದು ಶ್ಲಾಘನೀಯ. ಈ ಬಗ್ಗೆ ಅರಿವು ನೀಡಿ ಯೋಜನೆ ಸಫಲಗೊಳಿಸಲು ಸಹಕರಿಸಿರುವುದು ಪ್ರಶಂಸನೀಯ ಎಂದರು.
ಮುಂದಿನ ದಿನಗಳಲ್ಲಿಯೂ ಇತರೆ ಪೊಲೀಸ್ ಕಚೇರಿಗಳಲ್ಲೂ ಇದೇ ರೀತಿ ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಉತ್ತಮ ಪ್ರಶಂಸೆ:
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚಿನ ತನಿಖೆಗಳು, ಜನಪರ ಕಾರ್ಯಗಳಿಗೆ ಎಲ್ಲಾ ವೇದಿಕೆಗಳಲ್ಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಪೊಲೀಸರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಪೊಲೀಸ್ ಠಾಣೆಗಳು ಕೇವಲ ಉಳ್ಳವರು, ಬಲಿಷ್ಠರಿಗೆ ಮಾತ್ರ ಎಂಬಂತಾಗಿತ್ತು. ಆದರೆ ಈಗ ಬಡವರ, ದುರ್ಬಲರ ರಕ್ಷಣೆಗಾಗಿ ಭದ್ರಕೋಟೆಯಾಗಿ ಪರಿವರ್ತನೆಯಾಗಿವೆ. ಠಾಣೆಗೆ ದೂರು ಕೊಡಲು ಬರುವವರ ಜೊತೆ ಸಂಯಮದಿಂದ ವರ್ತಿಸಿ ಸಮಸ್ಯೆ ಆಲಿಸಬೇಕು ಎಂದು ಅವರು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಇಂದಿನ ಮಾಸಿಕ ಕವಾಯತು ಬಹಳ ಅತ್ಯುತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ ಡಿಸಿಪಿ ನಾಗರಾಜ್ ಅವರನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದರು.

RELATED ARTICLES

Latest News