ಬೀದರ್,ಏ.30– ಯುವತಿ ವಿಚಾರವಾಗಿ ರಾಜಿ ಪಂಚಾಯಿತಿಗೆಂದು ಮುಂಬೈನಿಂದ ದಂಪತಿಯನ್ನು ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಜಾಪರವಾಲಿ ಗ್ರಾಮದ ರಾಜು ಕೊಳಸೂಗೆ (28) ಮತ್ತು ಶಾರಿಕಾ ಕೊಳಸೂಗೆ (24) ಕೊಲೆಯಾದ ದಂಪತಿ.ಜಾಪರವಾಲಿ ಗ್ರಾಮದಲ್ಲಿ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ವಾಸವಿದ್ದರು.
ಈ ನಡುವೆ ರಾಜುಗೆ ಅದೇ ಗ್ರಾಮದ ಯುವತಿ ಜೊತೆ ಅಕ್ರಮ ಸಂಬಂಧವಿರುವ ವಿಷಯ ತಿಳಿದು ಗ್ರಾಮಸ್ಥರೆಲ್ಲ ಸೇರಿ ರಾಜಿ ಪಂಚಾಯಿತಿ ಮಾಡಿ ದಂಪತಿಯನ್ನು ಊರು ಬಿಟ್ಟು ಮುಂಬೈಗೆ ಕಳುಹಿಸಿದ್ದರು.ಮುಂಬೈಗೆ ಹೋದ 15 ದಿನದ ನಂತರ ರಾಜು ತನ್ನ ಚಾಳಿಬಿಡದೆ ಯುವತಿಯ ಪೋಟೋವನ್ನು ಫೇಸ್‌ಬುಕ್‌ಗೆ ಹಾಕಿದ್ದಾನೆ.
ಇದನ್ನು ಗಮನಿಸಿದ ಯುವತಿಯ ಸಹೋದರರು ಹಾಗೂ ಸಂಬಂಽಕರು ರಾಜಿ ಪಂಚಾಯಿತಿಗೆಂದು ರಾಜು ನನ್ನು ಮುಂಬೈನಿಂದ ಕರೆಸಿದ್ದಾರೆ.ರಾಜು ಜೊತೆ ಆತನ ಪತ್ನಿ ಹಾಗೂ ಮಗು ಸಹ ಗ್ರಾಮಕ್ಕೆ ನಿನ್ನೆ ಸಂಜೆ ಬಂದಿದ್ದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಆ ಸಂದರ್ಭದಲ್ಲಿ ರೊಚ್ಚಿಗೆದ್ದ ಯುವತಿಯ ಸಂಬಂಽಕರು ಕಬ್ಬು ಕತ್ತರಿಸುವ ಕುಡುಗೋಲು ರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಆವೇಳೆ ತಡೆಯಲುಬಂದ ಶಾರಿಕಾ ಮೇಲೂ ಕುಡುಗೋಲುನಿಂದ ಹಲ್ಲೆ ನಡೆಸಿದ್ದರಿಂದ ಇಬ್ಬರೂ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಅಪ್ಪ-ಅಮ್ಮನ ಸಾವಿನಿಂದ ಎರಡು ವರ್ಷದ ಮಗು ಆನಾಥವಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಮಂಠಾಳ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.