ಬೆಂಗಳೂರು, ಮೇ 31- ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಇಂದು ಮುಂಜಾನೆ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ವಿಚಾರಣೆಗೆ ನೀಡಬೇಕೆಂದು ಮನವಿ ಮಾಡಿದರು.
ವಾದ-ಪ್ರತಿವಾದಗಳನ್ನು ಆಲಿಸಿದ 42ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಶಿವಕುಮಾರ್ ಅವರು ಪ್ರಜ್ವಲ್ ರೇವಣ್ಣ ಅವರನ್ನು 6 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದರು.ಎಸ್‌ಐಟಿ ಪರ ವಕೀಲರಾದ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ವಾದ ಮಂಡಿಸಿ ಆರೋಪಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನೂರಕ್ಕೂ ಅಧಿಕ ಸಂತ್ರಸ್ತೆಯರಿದ್ದಾರೆ ಎಂದು ಹೊಳೆನರಸೀಪುರ ಪ್ರಕರಣವನ್ನು ಉಲ್ಲೇಖಿಸಿದರು.
ವಿಡಿಯೋ ವೈರಲ್ ಆದ ಬಳಿಕ ಹಲವು ಮಹಿಳೆಯರು ಸಂತ್ರಸ್ತೆಯರಾಗಿದ್ದಾರೆ. ಅವರಿಂದ ಮೊಬೈಲ್ ವಶಕ್ಕೆ ಪಡೆಯಬೇಕು. ಅವರ ಮೊಬೈಲ್‌ನಲ್ಲಿ ಫೇಸ್‌ಲಾಕ್ ಇದೆ. ಅದನ್ನು ಓಪನ್ ಮಾಡಲು ಇವರಿಗೆ ಮತ್ತು ಮಧು ಎಂಬುವವರಿಗೆ ಮಾತ್ರ ಅವಕಾಶವಿದೆ. ಹಾಗಾಗಿ ಹೆಚ್ಚಿನ ತನಿಖೆ ನಡೆಸಲು ಎಸ್‌ಐಟಿ ವಶಕ್ಕೆ ನೀಡಬೇಕೆಂದು ಎಂದು ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಪರ ವಕೀಲರಾದ ಅರುಣ್ ಅವರು ಪ್ರತಿವಾದ ಮಂಡಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಮೊದಲು ಸಂತ್ರಸ್ತೆ ದೂರು ನೀಡಿಲ್ಲ. ಯಾವುದೇ ದೃಶ್ಯ ರೆಕಾರ್ಡ್ ಆಗಿಲ್ಲ. ಏ.28 ರಿಂದ ಮೇ 2ರ ವರೆಗೆ ಅತ್ಯಾಚಾರದ ಉಲ್ಲೇಖವಿಲ್ಲ. ನ್ಯಾಯಯುತವಾಗಿ ಜಾಮೀನು ನೀಡಬಹುದಾದ ಪ್ರಕರಣ ಇದಾಗಿದೆ.
ಆದರೆ, ಸರ್ಕಾರಿ ಪರ ವಕೀಲರು ತಮಗಿಷ್ಟ ಬಂದ ಪದಗಳನ್ನು ಬಳಸಿ ವಾದ ಮಂಡಿಸಿದ್ದಾರೆ. ದೂರುದಾರರಿಂದ ರೆಡಿಮೇಡ್ ದೂರು ಸ್ವೀಕರಿಸಲಾಗಿದೆ. ವಿಡಿಯೋ ರೆಕಾರ್ಡ್ ಮಾಡಬೇಕೆಂಬ ನಿಯಮವಿದೆ. ಆದರೆ, ದೂರುದಾರರಿಂದ ವಿಡಿಯೋ ಹೇಳಿಕೆ ಪಡೆದಿಲ್ಲ. ತನಿಖೆಗೆ ಸಹಕರಿಸಲು ಪ್ರಜ್ವಲ್ ರೇವಣ್ಣ ಸಿದ್ಧರಿದ್ದಾರೆ. ಆದರೂ 15 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಕೇಳುತ್ತಿರುವ ಉದ್ದೇಶವೇನು ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರಶ್ನಿಸಿದರು.
ಲೈಂಗಿಕ ದೌರ್ಜನ್ಯ ಕೇಸ್ ಅತ್ಯಾಚಾರ ಕೇಸ್ ಆಗಿ ಪರಿವರ್ತನೆಯಾಗಿದೆ. ಡಿಯೋದಲ್ಲಿರುವವರ ಮುಖ ಆಧರಿಸಿ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, 15 ದಿನಗಳ ಕಾಲ ಕಸ್ಟಡಿ ಅಗತ್ಯವಿಲ್ಲ. ಕೇವಲ 1ದಿನ ಸಾಕು ಎಂದು ಹೇಳಿದರು.
ವಾದ,ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಜ್ವಲ್ ಅವರನ್ನು 6 ದಿನಕಾಲ ಎಸ್‌ಐಟಿ ವಶಕ್ಕೆ ನೀಡಿದರು.ವಿಚಾರಣೆ ಸಂದರ್ಭದಲ್ಲಿ ಕೋಟ್ ಹಾಲ್ ಕಿಕ್ಕಿರಿದು ತಂಬಿತ್ತು .