Monday, March 4, 2024
Homeರಾಜ್ಯಕಠಿಣ ಕ್ರಮಗಳ ಅಗತ್ಯವಿಲ್ಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕಠಿಣ ಕ್ರಮಗಳ ಅಗತ್ಯವಿಲ್ಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಡಿ.20- ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಸದ್ಯಕ್ಕೆ ಕೋವಿಡ್ ಸೋಂಕಿನ ವಿಷಯದಲ್ಲಿ ಗಡಿ ನಿಬಂಧನೆ, ಕ್ವಾರಂಟೈನ್‍ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಜನಸಾಮಾನ್ಯರು ಸಹಜವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ನೇತೃತ್ವದಲ್ಲಿ ನಡೆದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‍ಗುಂಡೂರಾವ್, ರಾಜ್ಯಸರ್ಕಾರ ಈವರೆಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಕೆಲವು ಸೂಚನೆಗಳನ್ನು ನೀಡಿದ್ದು, ಆಮ್ಲಜನಕ ಲಭ್ಯತೆ, ಐಸ್ಯುಲೇಷನ್ ಕೇಂದ್ರ, ಐಸಿಯು ಬೆಡ್‍ಗಳು, ಔಷಧಿಗಳು, ಚಿಕಿತ್ಸೆ ಹಾಗೂ ಪರೀಕ್ಷೆ ಸಲಕರಣೆಗಳು ಸಜ್ಜುಗೊಳಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದೆ.

ಗಡಿಭಾಗದಲ್ಲಿ ನಿಬಂಧನೆಗಳನ್ನು ವಿಧಿಸುವುದಾಗಲೀ, ವಿಮಾನನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸುವ ಸಂದರ್ಭ ಉದ್ಭವಿಸಿಲ್ಲ. ರೋಗ ಲಕ್ಷಣಗಳಿರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರಾಜ್ಯ ಅದರಂತೆ ನಡೆದುಕೊಳ್ಳುತ್ತಿದೆ. ವಿದೇಶಿ ಪ್ರಯಾಣಿಕರನ್ನು ಕ್ವಾರಂಟೈನ್‍ನಲ್ಲಿಡುವುದಾಗಲೀ, ಪರೀಕ್ಷೆಗೊಳಪಡಿಸುವುದಾಗಲೀ ಸದ್ಯಕ್ಕೆ ಮಾಡುತ್ತಿಲ್ಲ. ಅವರು ತಮ್ಮ ಮನೆಯಲ್ಲಿ 12 ದಿನಗಳ ಕಾಲ ಹೊರಗೆ ಓಡಾಡದಂತೆ ಎಚ್ಚರಿಕೆ ವಹಿಸುವ ಸ್ವಯಂ ಗೃಹಬಂಧನಕ್ಕೆ ಸಲಹೆ ನೀಡಲಾಗುತ್ತಿದೆ. ಕೇರಳದಲ್ಲೂ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಪಿಎಂ ಕೇರ್ ನಿಯಡಿ ಸ್ಥಾಪಿಸಲಾಗಿರುವ ಪಿಎಸ್‍ಎ ಆಮ್ಲಜನಕ ಉತ್ಪಾದಕ ಘಟಕಗಳ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದು, ಅದಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಆರ್‍ಟಿಸಿಆರ್ ಪರೀಕ್ಷೆಗೆ ಮಾದರಿ ಸಂಗ್ರಹಿಸುವ ರಾಸಾಯನಿಕ ದ್ರವವನ್ನೊಳಗೊಂಡ ಕೊಳವೆಗಳ ಕೊರತೆ ಇದೆ. ಅವುಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಪ್ರತಿಪಕ್ಷಗಳ ಸಂಸದರ ಅಮಾನತು ಸಮರ್ಥಿಸಿಕೊಂಡ ಹೇಮಮಾಲಿನಿ

ನಾಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪಿಪಿ ಕಿಟ್, ಮಾಸ್ಕ್ ಸೇರಿದಂತೆ ಇತರೆ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ತುರ್ತು ಲಭ್ಯತೆ ಹಾಗೂ ಮುಂದಿನ ಮೂರು ತಿಂಗಳ ಬೇಡಿಕೆ ಅಂದಾಜಿಸಿ ಪೂರ್ವ ಸಿದ್ಧತೆ ಕೈಗೊಳ್ಳಲಾಗುವುದು. ಶನಿವಾರದ ವೇಳೆಗೆ 5,000 ಕೋವಿಡ್ ಪರೀಕ್ಷೆಗಳನ್ನು ಮಾಡುವ ಸಾಮಥ್ರ್ಯ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೋವಿಡ್ ಸೋಂಕು ಪತ್ತೆಗೆ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಹಿಂದಿನ ದರವೇ ಮುಂದುವರೆಯುತ್ತಿದೆ. ನಾಳೆ ಮುಖ್ಯಮಂತ್ರಿಗಳ ನೇತೃತ್ವದದಲ್ಲಿ ನಡೆಯುತ್ತಿರುವ ತಾಂತ್ರಿಕ ಸಮಿತಿ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಜೆಎನ್-1 ಉಪತಳಿ ಪತ್ತೆಗೆ ಜಿನೋಮೆ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ಕನಿಷ್ಟ 10 ಮಾದರಿಗಳ ಅಗತ್ಯವಿದೆ. ಅಷ್ಟೂ ಲಭ್ಯವಿದ್ದಾಗ ಮಾತ್ರ ಸಮಗ್ರ ತಪಾಸಣೆ ನಡೆಸಿ ಉಪತಳಿಯ ಸ್ವರೂಪ ಏನು, ಯಾವ ಪ್ರಮಾಣದಲ್ಲಿದೆ, ಅದರ ಚಲನವಲನಗಳೇನು ಎಂಬುದನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು.

ವಿವಿಪ್ಯಾಟ್ ಸ್ಲಿಪ್‍ಗಳನ್ನು ಮತದಾರರಿಗೆ ನೀಡಲು ಇಂಡಿಯಾ ಒಕ್ಕೂಟ ಆಗ್ರಹ

ಕೋವಿಡ್ ದೈನಂದಿನ ದತ್ತಾಂಶಗಳನ್ನು ದಾಖಲಿಸಲು ಈ ಮೊದಲು ಅಸ್ತಿತ್ವದಲ್ಲಿದ್ದ ಐಸಿಎಂಆರ್ ವೆಬ್ ಫೋರ್ಟಲ್ ಸ್ಥಗಿತಗೊಂಡಿದ್ದು, ಅದನ್ನು ಮತ್ತೆ ಸಕ್ರಿಯಗೊಳಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜೆಎನ್-1 ಉಪತಳಿ ಅಷ್ಟು ಅಪಾಯಕಾರಿಯಲ್ಲ ಎಂಬ ಮಾಹಿತಿ ಇದೆ. ಆತಂಕ ಬೇಡ ಎಂಬ ಸೂಚನೆಯಿದ್ದು, ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸುವುದು ಸೂಕ್ತ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಹಾಗೂ ವೈದ್ಯರು ಮಾಸ್ಕ್ ಧರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

  • ಕೋವಿಡ್ ನಿಯಂತ್ರಣ ಸಂಬಂಧ ನಾಳೆ ಸಿಎಂ ನೇತೃತ್ವದಲ್ಲಿ ಸಭೆ
  • ಖಾಸಗಿ ಆಸ್ಪತ್ರೆಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷಾ ದರ ನಿಗದಿ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ
  • ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರ ನಿಗದಿ ಕುರಿತು ಚರ್ಚೆ
  • ವಿಮಾನನಿಲ್ದಾಣದಲ್ಲಿ ಪ್ರಾಥಮಿಕ ಪರೀಕ್ಷೆ ಇಲ್ಲ
  • ವಿದೇಶಿ ಪ್ರಯಾಣಿಕರಿಗೆ 12 ದಿನಗಳ ಸ್ವಯಂ ಗೃಹಬಂಧನ
  • ಕ್ವಾರಂಟೈನ್ ಕಡ್ಡಾಯಗೊಳಿಸುವ ಪರಿಸ್ಥಿತಿ ಉದ್ಭವಿಸಿಲ್ಲ
  • ಗಡಿ ನಿಬಂಧನೆಗಳು ಸದ್ಯಕ್ಕಿಲ್ಲ
  • ನೆರೆ ರಾಜ್ಯದಿಂದ ಆಗಮಿಸುವ ವೇಳೆಯಲ್ಲಿ ಹೆಚ್ಚು ಪರೀಕ್ಷೆ
  • ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕ್ಷೇಮ
RELATED ARTICLES

Latest News