Friday, November 22, 2024
Homeರಾಜ್ಯರಾಜಕೀಯ ಸಂಚಲನ ಸೃಷ್ಟಿಸಿದೆ ದರ್ಶನ್‌ ಕುರಿತ ಸಿ.ಪಿ.ಯೋಗೇಶ್ವರ್‌ ಹೇಳಿಕೆ

ರಾಜಕೀಯ ಸಂಚಲನ ಸೃಷ್ಟಿಸಿದೆ ದರ್ಶನ್‌ ಕುರಿತ ಸಿ.ಪಿ.ಯೋಗೇಶ್ವರ್‌ ಹೇಳಿಕೆ

ಬೆಂಗಳೂರು, ಜೂ.15-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ನಟ ದರ್ಶನ್‌ ಅವರನ್ನು ಕಣಕ್ಕಿಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ನೀಡಿರುವ ಹೇಳಿಕೆ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ.

ಈ ಹೇಳಿಕೆಯನ್ನು ಅಲ್ಲಗಳೆಯುವ ಬದಲಾಗಿ ಕಾಂಗ್ರೆಸಿಗರೇ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ. ಆದರೆ, ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಮತ್ತು ಅವರನ್ನು ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಸಿ.ಪಿ.ಯೋಗೇಶ್ವರ್‌, ಡಿ.ಕೆ.ಸಹೋದರರು ಕಣಕ್ಕಿಳಿಸಲು ಬಯಸಿದ್ದ ಅಚ್ಚರಿ ಅಭ್ಯರ್ಥಿ ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಎಂದಿದ್ದಾರೆ.ಸಿ.ಪಿ.ಯೋಗೇಶ್ವರ್‌ ಅವರು ದರ್ಶನ್‌ ಅವರ ಹೆಸರು ಹೇಳದಿದ್ದರೂ ಸಹಜವಾಗಿ ಜನರ ಗಮನ ಪ್ರಸಕ್ತ ವಿದ್ಯಮಾನಗಳತ್ತ ಹೊರಳಿದೆ.

ದರ್ಶನ್‌ ಅವರು, ಕಾಂಗ್ರೆಸ್‌‍ ಅಭ್ಯರ್ಥಿಯಾಗಲು ಬಯಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್‌ ತಮಗೆ ಆ ಬಗ್ಗೆ ಮಾಹಿತಿ ಇಲ್ಲ. ಆದರೆ, ಕೊಲೆ ಪ್ರಕರಣ ಬಯಲಿಗೆ ಬರುವ ಮುನ್ನ ಆ ರೀತಿಯ ಚರ್ಚೆಗಳು ನಡೆದಿದ್ದರೆ ತಪ್ಪೇನೂ ಇಲ್ಲ. ಕಾಂಗ್ರೆಸ್‌‍ನವರು ಇದೇ ರೀತಿಯ ಪ್ರಶ್ನೆಗಳನ್ನು ಕೇಳಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸಿದ್ದೇಕೆ? ಎಂದರೆ ಜೆಡಿಎಸ್‌‍ ಮತ್ತು ಬಿಜೆಪಿಯ ಬಳಿ ಉತ್ತರವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ದರ್ಶನ್‌ ಅವರನ್ನು ರಕ್ಷಿಸಲು ಕಾಂಗ್ರೆಸ್‌‍ನಲ್ಲಿ ಯಾರೂ ಪ್ರಯತ್ನಿಸುತ್ತಿಲ್ಲ. ಇದು ಕೊಲೆ ಪ್ರಕರಣ. ಕೊಲೆಯಾಗಿರುವ ಕುಟುಂಬದವರು ಆರೋಪಿಗಳು ಸುಲಭವಾಗಿ ಪಾರಾಗಲು ಬಿಡುವುದಿಲ್ಲ. ವಕೀಲರಿದ್ದಾರೆ, ಕಾನೂನು ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌‍ ಶಾಸಕ ಪ್ರಸಾದ್‌ ಅಬ್ಬಯ್ಯ ಮಾತನಾಡಿ, ದರ್ಶನ್‌ ಅವರನ್ನು ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ಪ್ರಯತ್ನ ನಡೆದಿತ್ತು ಎಂಬ ರಾಜಕೀಯ ವ್ಯಾಖ್ಯಾನಗಳು ನಡೆಯುತ್ತಿವೆ. ಆದರೆ, ಆ ರೀತಿಯ ನಿರ್ಧಾರವನ್ನು ಸಮಯ ಬಂದಾಗಷ್ಟೇ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌‍ನಲ್ಲೇ ಪ್ರಭಾವಿಗಳು ದರ್ಶನ್‌ ಅವರನ್ನು ರಕ್ಷಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು ಹಾಗೂ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ತಳುಕು ಹಾಕಿರುವುದು ಕಾವೇರಿದ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News