Sunday, September 15, 2024
Homeರಾಜಕೀಯ | Politicsಭಾರೀ ಕುತೂಹಲ ಕೆರಳಿಸಿದೆ ಸಿ.ಪಿ.ಯೋಗೇಶ್ವರ್‌ ದೆಹಲಿ ಭೇಟಿ

ಭಾರೀ ಕುತೂಹಲ ಕೆರಳಿಸಿದೆ ಸಿ.ಪಿ.ಯೋಗೇಶ್ವರ್‌ ದೆಹಲಿ ಭೇಟಿ

ಬೆಂಗಳೂರು,ಆ.11- ಯಾವುದೇ ಕ್ಷಣದಲ್ಲಿ ನಡೆಯಬಹುದಾದ ರಾಮನಗರ ಜಿಲ್ಲೆ ಚನ್ನಪಟ್ಟಣ ಉಪಚುನಾವಣೆ ಸಂಬಂಧ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ದೆಹಲಿಗೆ ದೌಡಾಯಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟರು.
ಮೂಲಗಳ ಪ್ರಕಾರ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿ.ಪಿ.ಯೋಗೇಶ್ವರ್‌ ಜೊತೆ ಮಾತುಕತೆ ನಡೆಸುವ ಸಂಭವವಿದೆ.

ಹೀಗಾಗಿಯೇ ಅವರನ್ನು ಪಕ್ಷದ ವರಿಷ್ಠರು ದೆಹಲಿಗೆ ಬರುವಂತೆ ಬುಲಾವ್‌ ನೀಡಿದ್ದು, ಯೋಗೇಶ್ವರ್‌ ಅವರ ಮುಂದಿನ ರಾಜಕೀಯ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.ದೆಹಲಿಯಲ್ಲಿ ನಡೆಯಲಿರುವ ಮಾತುಕತೆ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೇ ಇಲ್ಲವೇ? ಜೆಡಿಎಸ್‌‍ಗೆ ಕ್ಷೇತ್ರವನ್ನು ಬಿಟ್ಟುಕೊಡಬೇಕೇ? ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಗೊತ್ತಾಗಲಿದೆ.

ಯಾವುದೇ ರೀತಿಯ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಅಭಿಮಾನಿಗಳ ಪಾಲಿನ ಸೈನಿಕನಿಗೆ ವರಿಷ್ಠರು ಕಿವಿಮಾತು ಹೇಳಲಿದ್ದಾರೆ. ಏಕೆಂದರೆ ಟಿಕೆಟ್‌ ಸಿಗದಿದ್ದರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದರು.

ಇದಕ್ಕೆ ಪುಷ್ಟಿ ನೀಡುವಂತೆ ಯೋಗೇಶ್ವರ್‌ ಅಭಿಮಾನಿ ಬಳಗ ಮತ್ತು ಸಮಾನ ಮನಸ್ಕರ ವೇದಿಕೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಮ ಶಾಸಕ ನಮ ಹಕ್ಕು ಹೆಸರಿನಲ್ಲಿ ಸಮಾವೇಶ ನಡೆಸಿದೆ. ಉಪಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದರೇ ಸ್ವತಂತ್ರ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಾವೇಶ ನಡೆಸಲು ಮುಂದಾಗಿದ್ದ ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್‌ ದೆಹಲಿಗೆ ಬರುವಂತೆ ಸೂಚನೆ ನೀಡಿದೆ.

ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಪಕ್ಷದಿಂದ ಕಣಕ್ಕಿಳಿಯಲು ಬಯಸಿದ್ದ ಯೋಗೇಶ್ವರ್‌ಗೆ ಮೈತ್ರಿ ನಾಯಕರಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಪಕ್ಷೇತರರಾಗಿ ಕಣಕ್ಕಿಳಿಯುವ ಉದ್ದೇಶದಿಂದ ಬೃಹತ್‌ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರು.

ಸ್ವತಂತ್ರ ಸ್ಪರ್ಧೆಗೆ ಚಿಂತನೆ:
ಬಿಜೆಪಿ-ಜೆಡಿಎಸ್‌‍ ಪಾದಯಾತ್ರೆಯಿಂದ ದೂರ ಉಳಿದು ಬಂಡಾಯದ ಬಾವುಟ ಹಾರಿಸಿದ್ದ ಯೋಗೇಶ್ವರ್‌, ಸದ್ಯದಲ್ಲೇ ಎದುರುಗಾವು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು.ಚನ್ನಪಟ್ಟಣ ಟಿಕೆಟ್‌ ತಮಗೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲದ್ದ ಸಿ.ಪಿ.ಯೋಗೇಶ್ವರ್‌ ತಾವೇ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಕೂಡ ಮಾಡಿಕೊಂಡಿದ್ದರು. ಆದರೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಆಸೆಗೆ ತಣ್ಣೀರು ಎರಚಿದ್ದರು.

ಮಗ ನಿಖಿಲ್‌ ಕುಮಾರಸ್ವಾಮಿಗೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಅವರು ಲಾಬಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಗೇಶ್ವರ್‌ ಅವರು ವಿರೋಧಿಗಳಿಗೆ ಸ್ಪಷ್ಟ ಸಂದೇಶ ಸಾರಲು ತಮ ರಾಜಕೀಯ ನಿರ್ಧಾರ ಘೋಷಿಸಲು ಮುಂದಾಗಿದ್ದರು.

ಇದಕ್ಕಾಗಿ ಸಿ.ಪಿ.ಯೋಗೇಶ್ವರ್‌ ಬೆಂಬಲಿಗರು ಚನ್ನಪಟ್ಟಣದಲ್ಲಿ ಬೃಹತ್‌ ಸಮಾವೇಶವನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದ ಮೂಲಕ ವಿರೋಧಿಗಳಿಗೆ ಪಾಠ ಕಲಿಸುವುದು ಸಿಪಿ ಯೇಗೇಶ್ವರ್‌ ಮಹದಾಸೆಯಾಗಿತ್ತು.ಆದರೆ ಪಕ್ಷದ ಕೇಂದ್ರ ನಾಯಕರು ಕರೆ ನೀಡಿದ್ದ ಬೆನ್ನಲ್ಲೇ ಸಮಾವೇಶ ರದ್ದಾಗಿದೆ. ಇದರಿಂದಾಗಿ ತಮ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ತರಾತುರಿಯಲ್ಲಿದ್ದ ಸಿಪಿ ಯೇಗೇಶ್ವರ್‌ ಅವರಿಗೆ ನಿರಾಸೆಯಾಗಿದೆ.

ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಬಹುಮತ ಟಿಕೆಟ್‌ ಯಾರಿಗೆ ಎನ್ನುವುದು ನಿರ್ಧಾರವಾಗಲಿದೆ. ಸಭೆ ಬಳಿಕ ಸಿ.ಪಿ.ಯೋಗೇಶ್ವರ್‌ ಅವರ ಮುಂದಿನ ನಿರ್ಧಾರ ಗೊತ್ತಾಗಲಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಭಾರೀ ಕುತೂಹಲ ಉಂಟು ಮಾಡಿದೆ.

RELATED ARTICLES

Latest News