Sunday, November 3, 2024
Homeರಾಷ್ಟ್ರೀಯ | Nationalಮಳೆಯಿಂದ ಬೆಳೆ ಹಾನಿ, ವಾರದೊಳಗೆ ರೈತರಿಗೆ ಪರಿಹಾರ ನೀಡುವಂತೆ ಆರ್‌.ಅಶೋಕ್‌ ಒತ್ತಾಯ

ಮಳೆಯಿಂದ ಬೆಳೆ ಹಾನಿ, ವಾರದೊಳಗೆ ರೈತರಿಗೆ ಪರಿಹಾರ ನೀಡುವಂತೆ ಆರ್‌.ಅಶೋಕ್‌ ಒತ್ತಾಯ

Crop damage due to rain, R. Ashok insists to compensate the farmers within a week

ಬೆಂಗಳೂರು,ಅ.27- ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿ ರಾಜ್ಯದ ರೈತರು ಸಂಕಷ್ಟ ಎದುರಿಸುತ್ತಿರುವುದನ್ನ ವಿಪಕ್ಷಗಳು ಗಮನಕ್ಕೆ ತಂದ ಮೇಲೆ, ನಿದ್ದೆಯಿಂದ ಎದ್ದಿರುವ ಕಾಂಗ್ರೆಸ್‌‍ ಸರ್ಕಾರ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್‌ ಮಾಡಿರುವ ಅವರು, ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ ಹಾಗೂ ಈ ವರ್ಷದ ಮುಂಗಾರು ಬೆಳೆ ಹಾನಿ ಪರಿಹಾರ ವಿತರಣೆ ಸಂದರ್ಭದಲ್ಲಿ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈ ಸೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಫೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆಯಿದೆ, ಆಧಾರ್‌ ಲಿಂಕ್‌ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ವಿಳಂಬ ಮಾಡದೆ ಈಗಲೇ ಪೂರ್ವಸಿದ್ಧತೆ ಮಾಡಿಕೊಂಡು, ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಡಿಬಿಟಿ ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಕಳೆದ ಎರಡು ವರ್ಷದಿಂದ ಸತತವಾಗಿ ಬರ, ನೆರೆ ಹಾವಳಿಯಿಂದ ಹೈರಾಣಗಿರುವ ರೈತರು ವಾರದೊಳಗೆ ಪರಿಹಾರ ಹಣ ಕೈಸೇರಿದರೆ ದೀಪಾವಳಿ ಹಬ್ಬವನ್ನಾದರೂ ನೆಮದಿಯಿಂದ ಆಚರಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News