ಬೆಂಗಳೂರು, ಜೂ.20- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ಪೊಲೀಸ್ ಕಸ್ಟಡಿಯು ಇಂದು ಅಂತ್ಯವಾಗಲಿದ್ದು, ಸಂಜೆಯೊಳಗೆ ಎಲ್ಲಾ ಆರೋಪಿಗಳನ್ನು ವಿಜಯನಗರ ಉಪವಿಭಾಗದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಜೂ.9ರಂದು ರೇಣುಕಾಸ್ವಾಮಿ ಮೃತದೇಹ ಪತ್ತೆಯಾದ ಬಳಿಕ ಮೂವರು ಆರೋಪಿಗಳು ತಾವೇ ಖುದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು.ನಂತರ ಈ ಮೂವರಿಂದ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ರೇಣುಕಾಸ್ವಾಮಿ ಕೊಲೆ ಹಿಂದೆ ದರ್ಶನ್, ಪವಿತ್ರಾಗೌಡ ಹೆಸರು ಕೇಳಿ ಬಂದಿತ್ತು.
ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ಹಲವು ಮಾಹಿತಿಗಳನ್ನು ಕಲೆಹಾಕಿ ದರ್ಶನ್ ಸೇರಿದಂತೆ ಆತನ ಗ್ಯಾಂಗ್‌ನ ಹಲವರನ್ನು ಬಂಧಿಸಿ ಹಲವು ಮಾಹಿತಿಗಳನ್ನು ಹಾಗೂ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.ಈಗಾಗಲೇ ಪೊಲೀಸರು ಎರಡು ಬಾರಿ ಆರೋಪಿಗಳನ್ನು ತಮ ಕಸ್ಟಡಿಗೆ ಪಡೆದು ಅವರ ಹೇಳಿಕೆಗಳನ್ನು ದಾಖಲಿಸಿ ಸ್ಥಳ ಮಹಜರು ಮಾಡಿ ಕೆಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.
ಬಹುತೇಕ ಆರೋಪಿಗಳ ವಿಚಾರಣೆ ಮುಗಿದಿರುವುದು ಕಂಡು ಬಂದಿದೆ. ಆರೋಪಿಗಳ ಸ್ವ-ಇಚ್ಛಾ ಹೇಳಿಕೆಗಳಿಂದ ಏನಾದರೂ ಹೊಸ ಮಾಹಿತಿ ಲಭ್ಯವಾಗಿದ್ದರೆ ಆ ಬಗ್ಗೆ ತನಿಖೆ ನಡೆಸಲು ಕೆಲವು ಆರೋಪಿಗಳನ್ನು ಮತ್ತೆ ಮೂರ್ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಡುವಂತೆ ಪೊಲೀಸರು ನ್ಯಾಯಾಲಯದ ಮುಂದೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಒಂದು ವೇಳೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ನಟ ದರ್ಶನ್ ಮತ್ತು ಆತನ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ.ಒಟ್ಟಾರೆ ಇಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು, ಮುಂದೇನಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.