Sunday, July 21, 2024
Homeರಾಜಕೀಯಹುಕ್ಕೇರಿಯಲ್ಲಿ ಡಿಸಿಎಂಗೆ ಕಾಡಿದ ಏಕಾಂಗಿತನ..!

ಹುಕ್ಕೇರಿಯಲ್ಲಿ ಡಿಸಿಎಂಗೆ ಕಾಡಿದ ಏಕಾಂಗಿತನ..!

ಹುಕ್ಕೇರಿ,ಅ.19: ಉಪಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಬುಧವಾರ ಹುಕ್ಕೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಗಡಿಬಿಡಿ ಮಾಡಿದರು. ಇದರಿಂದ ಕಾರ್ಯಕರ್ತರ ಮನೋಸ್ಥೈರ್ಯ ತುಂಬಲು ವೇದಿಕೆಯಾಗಬೇಕಿದ್ದ ಸಮಾವೇಶ ನೀರಸ ಎನಿಸಿತು.

ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಬಹುತೇಕ ನಾಯಕರ ಗೈರು ಹಾಜರಿ ಡಿಸಿಎಂ ಡಿಕೆಶಿ ಗಡಿಬಿಡಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಜಿಲ್ಲಾ ನಾಯಕರ ಅನುಪಸ್ಥಿತಿಯಿಂದ ಡಿಕೆ ಮುಖ ಕಳಾಹೀನವಾದಂತೆ ಕಂಡು ಬಂದಿತು.

ಪಟ್ಟಣ ಹೊರವಲಯದ ರವದಿ ಫಾರ್ಮಹೌಸ್‍ನಲ್ಲಿ ನಡೆದ ಹುಕ್ಕೇರಿ ವಿಧಾನಸಭಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹೆಚ್ಚಾಗಿ ಗದ್ದಲ-ಗಲಾಟೆಗಳದ್ದೇ ಸದ್ದು ಕೇಳಿ ಬಂದಿತು. ನಿಗದಿತ ಮಧ್ಯಾಹ್ನ 3.30 ಬದಲಾಗಿ ಸಂಜೆ 5.10 ಗಂಟೆಗೆ ಸಮಾವೇಶಕ್ಕೆ ಡಿಸಿಎಂ ಆಗಮಿಸಿದರು. ಕೇವಲ ಒಂದು ಗಂಟೆ ಅವಯೊಳಗೆ ಸಮಾವೇಶ ಮುಕ್ತಾಯವಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ ತರಾತುರಿಯಲ್ಲಿ ಭಾಷಣ ಮುಗಿಸಿ ಶ್ರೀಮಠದ ಕಾರ್ಯಕ್ರಮದತ್ತ ಹೊರಟ ಹೋಗಿದ್ದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.

ಇನ್ನು ಸಮಾವೇಶದ ಮುಖ್ಯ ವೇದಿಕೆ, ಎಡ ಹಾಗೂ ಬಲ ಬದಿಯಲ್ಲಿ ಕಾರ್ಯಕ್ರಮದುದ್ದಕ್ಕೂ ನೂಕುನುಗ್ಗಲು ಉಂಟಾಯಿತು. ಶಾಂತತೆ ಕಾಪಾಡಿಕೊಳ್ಳುವಂತೆ ಆಯೋಜಕರು ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಡಿಕೆಶಿ ಭೇಟಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲು ನಿರಾಕರಿಸಿದ್ದರಿಂದ ವಿಕಲಚೇತನರು, ದಲಿತ ಹಾಗೂ ರೈತಪರ ಹೋರಾಟಗಾರರು ಹಳಹಳಿಸಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-10-2023)

ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಹುಕ್ಕೇರಿ ಸಭೆಯಲ್ಲಿಯೂ ಮುಂದುವರೆದಿದ್ದು ಕಂಡು ಬಂದಿತು. ಜಾರಕಿಹೊಳಿ ಪ್ರತಿನಿಸುವ ತಾಲೂಕಿನ ಯಮಕನಮರಡಿ ಕ್ಷೇತ್ರದ ಮುಂಚೂಣಿ ನಾಯಕರು, ಕಾರ್ಯಕರ್ತರು ಸಭೆಯಿಂದ ಅಂತರ ಕಾಯ್ದುಕೊಂಡರು. ಈ ಮೂಲಕ ತಮ್ಮ ಬೆಂಬಲಿಗರು ಸಭೆಯಿಂದ ಹೊರಗುಳಿಯುವಂತೆ ನೋಡಿಕೊಂಡ ಜಾರಕಿಹೊಳಿ, ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಡಿಸಿಎಂಗೆ ತಿರುಗೇಟು ನೀಡಿದರು ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ-ಜೆಡಿಎಸ್ ನರಳಾಟ: ಡಿಸಿಎಂ ಡಿಕೆಶಿ ಲೇವಡಿ
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನರಳಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಲೇವಡಿ ಮಾಡಿದರು. ಹುಕ್ಕೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸೋಲಿನ ಹತಾಸೆಯಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈ-ಕೈ ಪರಚಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ನ್ಯಾಯ-ರಕ್ಷಣೆ ಒದಗಿಸಿದೆ. ಐತಿಹಾಸಿಕ ತೀರ್ಮಾಣ ಕೈಗೊಂಡು ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿದೆ. ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ, ಗೃಹಜ್ಯೋತಿ, ಮಹಿಳೆಯರ ಉಚಿತ ಬಸ್ ಪ್ರಯಾಣ, ಹೆಚ್ಚುವರಿ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾರ್ಯಕರ್ತರ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುವುದು. ತಾವು ಸನ್ಮಾನಿಸಿದ ಹಾರ ಭಾರವಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ವಿಜಯ ರವದಿ, ಸಂತೋಷ ಮುಡಸಿ, ಮಹಾಂತೇಶ ಮಗದುಮ್ಮ, ಮಲ್ಲಿಕಾರ್ಜುನ ರಾಶಿಂಗೆ, ರಿಷಭ್ ಪಾಟೀಲ, ಶೀತಲ್ ಹಿರೇಮಠ, ಇಮ್ರಾನ್ ಮೋಮಿನ್, ಚಂದು ಗಂಗಣ್ಣವರ, ರೇಖಾ ಚಿಕ್ಕೋಡಿ, ಮಹೇಶ ಗುಮಚಿ, ಶಾನೂರ್ ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News