ಧಾರವಾಡ,ನ.13- ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಆರೋಪಿಗಳಿಗೆ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ಧಾರವಾಡ ಸಂಚಾರಿ ಪೀಠ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮರಕುಂಬಿ ಗ್ರಾಮಸ್ಥರು ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಧಾರವಾಡದ ಹೈಕೋರ್ಟ್ನ ಸಂಚಾರಿ ಪೀಠದ ನ್ಯಾಯಮೂರ್ತಿಗಳು ಶಿಕ್ಷೆಗೆ ತಡೆಯಾಜ್ಞೆ ನೀಡಿದರು.
98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿರುವುದರಿಂದ ಈ ತೀರ್ಪು ಅಪರೂಪದ ಪ್ರಕರಣವಾಗಿತ್ತು. ಹಲವು ಸಂತ್ರಸ್ತರ ಕುಟುಂಬ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದರು. 117 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 101 ಮಂದಿಗೆ ಶಿಕ್ಷೆ ವಿಧಿಸಲಾಗಿದ್ದು, 16 ಆರೋಪಿಗಳು ಮೃತಪಟಿದ್ದರು.
ಪ್ರಕರಣದ ಹಿನ್ನಲೆ: 2014ರ ಆಗಸ್ಟ್ 28ರಂದು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರದಲ್ಲಿ ಇದೇ ಮರಕುಂಬಿ ಗ್ರಾಮದ ದಲಿತ ಸಮುದಾಯದ ಮಂಜುನಾಥ ಮತ್ತು ಸ್ನೇಹಿತರು ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯೋ ವಿಚಾರದಲ್ಲಿ ಸವರ್ಣೀಯರು ಜಗಳ ಆರಂಭಿಸಿದ್ದರು. ಅಂದು ಸಂಜೆ ಗ್ರಾಮದ ಸವರ್ಣೀಯರು ಇದೇ ವಿಚಾರದ ನೆಪದ ಮೇಲೆ ದಲಿತರ ಮನೆಗಳಿಗೆ ನುಗ್ಗಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.
2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ದಲಿತರ ಗುಡಿಸಲುಗಳಿಗೆ ಇತರ ಸಮುದಾಯದ ಕೆಲವರು ಬೆಂಕಿ ಹಚ್ಚಿದ್ದರು. ಅನೇಕ ದಲಿತ ಮುಖಂಡರು ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.
2014ರಲ್ಲಿ ಮರುಕುಂಬಿ ಗ್ರಾಮದ ದಲಿತ ನಿವಾಸಿಗಳ ಪ್ರದೇಶಕ್ಕೆ ನೂರಾರು ಜನರು ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದರು, ಘರ್ಷಣೆ ಭುಗಿಲೆದ್ದಿತು ಮತ್ತು ದಲಿತರಿಗೆ ಬೆಂಕಿ ಹಚ್ಚಲಾಯಿತು. ಗ್ರಾಮದ ಕ್ಷೌರಿಕ ಅಂಗಡಿ ಮತ್ತು ಹೋಟೆಲ್ಗಳಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದೇ ಘರ್ಷಣೆಗೆ ಕಾರಣ ಎನ್ನಲಾಗಿದೆ. ಮೂರು ತಿಂಗಳಿನಿಂದ ಮರುಕುಂಬಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.