Wednesday, October 29, 2025
Homeಇದೀಗ ಬಂದ ಸುದ್ದಿಕಳ್ಳತನ ಮಾಡಿ ರೈಲು, ಬಸ್‌‍ಗಳಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಮನೆಗಳ್ಳರ ಸೆರೆ

ಕಳ್ಳತನ ಮಾಡಿ ರೈಲು, ಬಸ್‌‍ಗಳಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಮನೆಗಳ್ಳರ ಸೆರೆ

ಬೆಂಗಳೂರು,ಅ.29– ನಗರದಲ್ಲಿ ಮನೆಗಳ್ಳತನ ಮಾಡಿಕೊಂಡು ಸುಳಿವು ಸಿಗಬಾರದೆಂದು ರೈಲು, ಬಸ್‌‍ ಮತ್ತು ಆಟೋರಿಕ್ಷಾದಲ್ಲಿ ಕೆಜಿಎಫ್‌ಗೆ ಪರಾರಿಯಾಗಿದ್ದ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ 72 ಲಕ್ಷ ರೂ. ಮೌಲ್ಯದ 614 ಗ್ರಾಂ ಚಿನ್ನಾಭರಣ ಹಾಗೂ 470 ಗ್ರಾಂ ಬೆಳ್ಳಿಯ ವಸ್ತುಗಳ ವಶಪಡಿಸಿಕೊಂಡಿದ್ದಾರೆ.

ಕೆಜಿಎಫ್‌ ನಿವಾಸಿಗಳಾದ ಶಾಂತ ಕುಮಾರ್‌ ಮತ್ತು ಜ್ಞಾನ ಪ್ರಕಾಶ್‌ ಬಂಧಿತ ಆರೋಪಿಗಳು. ಇವರ ಮೇಲೆ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ.ಇವರಿಬ್ಬರು ಆರೋಪಿಗಳು ನಗರದಲ್ಲಿ ಮನೆಗಳ್ಳತನ ಮಾಡಿ ಯಾರಿಗೂ ಸುಳಿವು ಸಿಗಬಾರದೆಂದು ಸ್ವಲ್ಪ ದೂರ ರೈಲಿನಲ್ಲಿ ಪ್ರಯಾಣಿಸಿ ನಂತರ ಬಸ್‌‍ನಲ್ಲಿ ಹೋಗಿ ತದ ನಂತರ ಆಟೋದಲ್ಲಿ ಮನೆ ಸೇರುತ್ತಿದ್ದರು ಎಂಬುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

- Advertisement -

ಇವರಿಬ್ಬರು ಯಾವುದೇ ಮೊಬೈಲ್‌ ಬಳಸುತ್ತಿರಲಿಲ್ಲ ಹಾಗಾಗಿ ಅವರ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೂ ಸಹ ಪೊಲೀಸರು ತಾಂತ್ರಕ ಆಧಾರದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಪ್ರಿಯ ಲೇಔಟ್‌ ನಿವಾಸಿಯೊಬ್ಬರು ಉಡುಪಿಗೆ ಹೋಗಿದ್ದರು. ಅವರು ವಾಪಸ್ಸು ಮನೆಗೆ ಬಂದು ನೋಡಿದಾಗ ಮುಂಬಾಗಿಲ ಬೀಗವನ್ನು ಒಡೆದಿರುವುದು ಕಂಡು ಬಂದಿದೆ. ಗಾಬರಿಯಾಗಿ ಅವರು ಮನೆಯ ಒಳಗೆ ಹೋಗಿ ನೋಡಿದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ 330 ಗ್ರಾಂ ಚಿನ್ನಾಭರಣಗಳು ಮತ್ತು 1 ಕೆ.ಜಿ 200 ಗ್ರಾಂ ಬೆಳ್ಳಿಯ ವಸ್ತುಗಳು ಕಳವು ಆಗಿರುವುದು ಕಂಡು ಬಂದಿದೆ.

ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಬೇಗೂರು ಕೆರೆ ಕೋಡಿ ಹತ್ತಿರ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಬ್ಬ ಸಹಚರನೊಂದಿಗೆ ಸೇರಿ ಮನೆ ಕನ್ನ ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವ ಚಿನ್ನಾಭರಣಗಳನ್ನು ಕೆಜಿಎ್‌‍ನಲ್ಲಿರುವ 3 ಗಿರವಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸಿದ್ದು ತನಿಖೆಯನ್ನು ಮುಂದುವರೆಸಿ, ಗಿರವಿ ಅಂಗಡಿಗಳಿಂದ 233 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಮತ್ತೊಬ್ಬ ಸಹಚರನನ್ನು ಮುನೇಶ್ವರ ಲೇಔಟ್‌ ಬಳಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಚಿಂತಾಮಣಿ ತಾಲ್ಲೂಕಿನಲ್ಲಿರುವ 3 ಜ್ಯೂವೆಲರಿ ಅಂಗಡಿಗಳು ಹಾಗೂ ಕೆಜಿಎಫ್ ನಲ್ಲಿರುವ 3 ಜ್ಯೂವೆಲರಿ ಅಂಗಡಿಗಳಿಂದ ಒಟ್ಟು 381 ಗ್ರಾಂ ಚಿನ್ನದ ವಡವೆಗಳನ್ನು ಹಾಗೂ 470 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಬೇಗೂರು ಠಾಣೆಯ 3 ಮನೆ ಕಳವು ಪ್ರಕರಣ,ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಪೊಲೀಸ್‌‍ ಠಾಣೆಯ 1 ಮನೆ ಕಳವು ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್‌ ಕೃಷ್ಣಕುಮಾರ್‌ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿತ್ತು.

- Advertisement -
RELATED ARTICLES

Latest News