ಬೆಂಗಳೂರು,ಜೂ.18- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಬಲ ಸಾಕ್ಷಿಯಾದ ಸಿಸಿ ಟಿವಿ ಪುಟೇಜ್ಗಳನ್ನು ಆಧರಿಸಿ ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
ರಘು ಮತ್ತು ಆತನ ತಂಡ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ಗೆ ಕರೆದೊಯ್ದ ನಂತರ ಶೆಡ್ನಲ್ಲಿ ದರ್ಶನ್ ಮತ್ತು ಆತನ ತಂಡ ಹಲ್ಲೆ ನಡೆಸಿರುವ ದೃಶ್ಯ ಶೆಡ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ. ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಮೊದಲು ನಾಲ್ವರು ಆರೋಪಿಗಳು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಈ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಯಾರ್ಯಾರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ
ಕಲೆ ಹಾಕಿದಾಗ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಕೇಳಿಬಂದಿದೆ. ಇತರೆ ಆರೋಪಿಗಳ ಮಾಹಿತಿ ಹಾಗೂ ಸಿಸಿಟಿವಿ ಪುಟೇಜ್ಗಳು, ಮತ್ತಿತರ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದಾಗ ದರ್ಶನ್ ಮತ್ತು ಪವಿತ್ರ ಇಬ್ಬರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ಗೊತ್ತಾಗಿದೆ.
ಇಬ್ಬರು ಒಟ್ಟಿಗೆ ಶೆಡ್ಗೆ ಹೋಗಿರುವುದು ಹಾಗೂ ಒಟ್ಟಿಗೆ ಹೊರಬಂದಿರುವುದು ತನಿಖೆಯಿಂದ ಗೊತ್ತಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಅಳವಡಿಸಿರುವ ಸಿಸಿಟಿವಿಯು ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿದೆ.
ರೇಣುಕಾಸ್ವಾಮಿಗೆ ಬಹಳ ಹಿಂಸೆ ನೀಡಿ ಎಲೆಕ್ಟ್ರಿಕ್ ಶಾಕ್ ಕೊಟ್ಟು ಭೀಕರವಾಗಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಇದೆಲ್ಲದರ ವಿಡಿಯೋ ಹಾಗೂ ತಾಂತ್ರಿಕ, ಪೂರಕ ಸಾಕ್ಷಿಗಳು ದೊರೆತಿರುವ ಹಿನ್ನಲೆಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡನನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.