Friday, November 22, 2024
Homeರಾಜ್ಯಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು

ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದಿಟ್ಟ ಹುಲಿ ಉಗುರು

ಬೆಂಗಳೂರು,ಅ.25- ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ತೀವ್ರವಾಗಿದ್ದು, ಹುಲಿ, ಜಿಂಕೆ, ಕರಡಿಗಳಂತಹ ಪ್ರಾಣಿಗಳ ಚರ್ಮ ಹಾಗೂ ಇತರ ಅವಶೇಷಗಳ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸ್ರ್ಪಧಿಯಾಗಿದ್ದ ವರ್ತೂರು ಸಂತೋಷ್ ವಿರುದ್ಧ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಷ್ಠಾನದ ಕುರಿತು ಚರ್ಚೆಗಳು ವ್ಯಾಪಕಗೊಳ್ಳುತ್ತಿದೆ.

ವಿಧಾನಪರಿಷತ್‍ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಿ.ಆರ್.ರಮೇಶ್ ಅವರು, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್‍ರವರಿಗೆ ದೂರು ನೀಡಿದ್ದು, ಹುಲಿ ಉಗುರಿನ ಡಾಲರ್ ಹೊಂದಿರುವ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಜಾವೇದ್ ಅಖ್ತರ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ದೂರನ್ನು ರವಾನೆ ಮಾಡಿರುವುದಾಗಿ ರಮೇಶ್ ಅವರಿಗೆ ತಿಳಿಸಿದ್ದಾರೆ. ಇದರ ಜೊತೆಯಲ್ಲಿ ನಟರಾದ ದರ್ಶನ್, ನಿಖಿಲ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಗೌರಿಗದ್ದೆಯ ವಿನಯ್ ಗುರೂಜಿ, ತುಮಕೂರು ಜಿಲ್ಲೆಯ ಬಿದನಗೆರೆ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಧರ್ಮದರ್ಶಿ ಧನಂಜಯ ಗುರೂಜಿ ಸೇರಿದಂತೆ ಹಲವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಡಗಳು ಹೆಚ್ಚಾಗುತ್ತಿವೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿಗಳ ಅಂಗಾಂಗ ಮತ್ತು ಅವಶೇಷಗಳ ಮಾರಾಟ, ಬಳಕೆ ಸಂಪೂರ್ಣ ನಿಷಿದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಹಲವಾರು ಮಂದಿ ಅದೃಷ್ಟ ಹಾಗೂ ಶುಭಸೂಚಕ ಎಂಬ ನಂಬಿಕೆಯ ಮೇಲೆ ಹುಲಿ ಉಗುರಿನ ಪದಕಗಳು, ಆನೆಬಾಲದ ಕೂದಲಿನ ಉಂಗುರ ಧರಿಸುವುದು ಸೇರಿದಂತೆ ಹಲವಾರು ಉಲ್ಲಂಘನೆಗಳನ್ನು ಮಾಡುತ್ತಿದ್ದಾರೆ. ಇದು ನಂಬಿಕೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಈವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ವರ್ತೂರು ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮುನ್ನಲೆಗೆ ಬಂದಿದೆ. ಬಿಗ್‍ಬಾಸ್ ಸ್ರ್ಪಧಿಯ ವಿರುದ್ಧ ಕ್ರಮ ಕೈಗೊಂಡಂತೆ ಪ್ರಭಾವಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.

ವನ್ಯಜೀವಿಗಳ ಅಂಗಾಂಗಳನ್ನು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಸಾವಿರಾರು ಮಂದಿಯನ್ನು ಜೈಲಿಗೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ಪ್ರಕರಣ ಮೇಲ್ನೋಟಕ್ಕೆ ಸಾಧಾರಣ ಎನಿಸಿದರೂ ಒಮ್ಮೆ ದಾಖಲಾದರೆ ಅದರ ಗಂಭೀರತೆ ಬೇರೆಯದಾಗಿರುತ್ತದೆ. ತಪ್ಪಿತಸ್ಥರ ಬಳಿ ಇರುವ ವಸ್ತುಗಳನ್ನು ಜಪ್ತಿ ಮಾಡಬೇಕು. ಅದನ್ನು ಎಫ್‍ಎಸ್‍ಎಲ್ ಪರೀಕ್ಷೆಗೆ ಒಳಪಡಿಸಬೇಕು. ಅದು ಆರೋಪಿಗಳ ಬಳಿ ಬಂದ ರೀತಿ ಹೇಗೆ ಎಂಬುದನ್ನು ಪತ್ತೆ ಹಚ್ಚಬೇಕು. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸುವ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವುದು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿದೆ.

ನವಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಇಸ್ರೋ ಅಧ್ಯಕ್ಷ ಸೋಮನಾಥ್ ಆತ್ಮಚರಿತ್ರೆ

1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತಂದಿದ್ದು, 2002 ರ ಬಳಿಕ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರು ಹೊಂದಿರುವ ವನ್ಯಜೀವಿಗಳ ಅವಶೇಷಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಮಂದಿ ಇದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಆ ಬಳಿಕ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಎಲ್ಲಾ ರಾಜ್ಯಸರ್ಕಾರಗಳು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ.

ಹೀಗಾಗಿ ವನ್ಯಜೀವಿಗಳನ್ನು ಬಳಕೆ ಮಾಡುವ ಎಲ್ಲಾ ಸರ್ಕಸ್‍ಗಳು ಮುಚ್ಚಿಹೋಗಿವೆ. ವನ್ಯಜೀವಿಗಳ ಬೇಟೆ ಕೊಲೆಯಷ್ಟೇ ಗಂಭೀರ ಸ್ವರೂಪದ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಪ್ರಭಾವಿ ರಾಜಕಾರಣಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ತೋಟದ ಮನೆಯಲ್ಲಿ ಕೆಲವು ವನ್ಯಜೀವಿಗಳು ಪತ್ತೆಯಾಗಿದ್ದವು. ಈ ಸಂಬಂಧಪಟ್ಟಂತೆ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅನಂತರ ಕನ್ನಡದ ಪ್ರಖ್ಯಾತ ನಟರೊಬ್ಬರ ಫಾರ್ಮ್‍ಹೌಸ್‍ನಲ್ಲಿದ್ದ ವನ್ಯಜೀವಿಗಳನ್ನೂ ಕೂಡ ಸಂರಕ್ಷಿಸಿ ನಟನಿಗೆ ತಿಳುವಳಿಕೆ ನೀಡಲಾಯಿತು.

ವರ್ತೂರು ಸಂತೋಷ್‍ರ ಹುಲಿ ಉಗುರಿನ ಪ್ರಕರಣ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕುರಿತು ಚರ್ಚೆಗೆ ಹೊಸ ವ್ಯಾಖ್ಯಾನ ನೀಡಿದೆ. ಈ ಹಿಂದಿನಿಂದಲೂ ವಂಶಪಾರಂಪರ್ಯವಾಗಿ ಬಳಕೆಯಲ್ಲಿರುವ ಅವಶೇಷಗಳ ಕುರಿತು ಪ್ರಶ್ನೆಗಳು ಎದ್ದಿವೆ.

ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಗೂಗಲ್ ಲೈವ್ ಬಂದ್

ಪ್ರಸ್ತುತ ಸನ್ನಿವೇಶದಲ್ಲಿ ವನ್ಯಜೀವಿಗಳ ಅವಶೇಷಗಳನ್ನು ಹೊಂದಿರುವವರಿಗೆ ಆತಂಕ ಶುರುವಾಗಿದ್ದು, ಅರಣ್ಯಾಧಿಕಾರಿಗಳ ಹಿಡಿತದಿಂದ ಪಾರಾಗಲು ವಕೀಲರ ಮೊರೆ ಹೋಗುತ್ತಿರುವುದು ಕಂಡುಬಂದಿದೆ.

RELATED ARTICLES

Latest News