Sunday, May 19, 2024
Homeರಾಜ್ಯಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ

ಬೆಂಗಳೂರು,ಅ.25- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ನಡುವಿನ ಕ್ಷೇತ್ರಗಳ ಹಂಚಿಕೆ ವಿಳಂಬವಾಗುವ ಸಾಧ್ಯತೆಗಳಿವೆ. ದಸರಾ ಮಹೋತ್ಸವ ಮುಗಿದ ಬಳಿಕ ಜೆಡಿಎಸ್ ನಾಯಕರು ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಹಂಚಿಕೆ ವಿಚಾರವನ್ನು ಅಂತಿಮಗೊಳಿಸುವ ಉದ್ದೇಶವಿತ್ತು.

ಪಂಚರಾಜ್ಯ ಚುನಾವಣೆ ಸಿದ್ಧತೆಯಲ್ಲಿ ಬಿಜೆಪಿ ನಾಯಕರು ನಿರತರಾಗಿರುವುದರಿಂದ ಜೆಡಿಎಸ್ ನಾಯಕರೊಂದಿಗೆ ನಡೆಸಬೇಕಿರುವ ಮಾತುಕತೆ ಮತ್ತಷ್ಟು ವಿಳಂಬವಾಗಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದಸರಾ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಕ್ಷೇತ್ರ ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಿದ್ದರು. ಬಿಜೆಪಿ ನಾಯಕರ ಭೇಟಿಗೆ ಇನ್ನೂ ಸಮಯಾವಕಾಶ ನಿಗದಿಯಾಗದಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಡುವಿನ ಕ್ಷೇತ್ರ ಹಂಚಿಕೆ ಮತ್ತಷ್ಟು ವಿಳಂಬವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಪಂಚರಾಜ್ಯ ಚುನಾವಣೆಗಳ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರೊಂದಿಗಿನ ಮಾತುಕತೆಗೆ ಮುಹೂರ್ತ ನಿಗದಿಪಡಿಸಿಲ್ಲ. ಯಾವುದೇ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆದು ಸೀಟು ಹಂಚಿಕೆಯಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಚಿಂಥನ-ಮಂಥನ ಸಭೆ ನಡೆಸಿ ಮೈತ್ರಿ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, ತಾವು ಒರ್ಜಿನಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದು, ಮೈತ್ರಿ ವಿರೋಧವಿದೆ ಎಂದು ಹೇಳಿದ್ದರು. ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿತು.

ಇಬ್ರಾಹಿಂ ಅವರ ಈ ಹೇಳಿಕೆಯ ಬೆನ್ನಲ್ಲೇ ಜೆಡಿಎಸ್ ರಾಜ್ಯಘಟಕವನ್ನು ದೇವೇಗೌಡರು ವಿಸರ್ಜನೆ ಮಾಡುವ ಮೂಲಕ ಇಬ್ರಾಹಿಂ ಅವರಿಗೆ ಅಕಾರ ಇಲ್ಲದಂತೆ ಮಾಡಿದ್ದಾರೆ. ಜೆಡಿಎಸ್‍ನಲ್ಲಿ ನಡೆದ ಈ ರೀತಿಯ ಘಟನೆ ಲೋಕಸಭಾ ಸೀಟು ಹಂಚಿಕೆಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ನಾಲ್ಕು ಕ್ಷೇತ್ರಗಳನ್ನು ಮಾತ್ರ ಸ್ಪರ್ಧೆ ಮಾಡಲು ಇಚ್ಛಿಸಿದೆ. ಹಾಸನ, ತುಮಕೂರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಉಳಿದ 24 ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡುವ ಉದ್ದೇಶ ಹೊಂದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಎನ್‍ಡಿಎ ಮೈತ್ರಿಕೂಟ ಸೇರುವುದಾಗಿ ಘೋಷಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲಿವೆ. ಚುನಾವಣೆ ಪ್ರಚಾರವನ್ನು ಒಟ್ಟಾಗಿಯೇ ಮಾಡುವುದಲ್ಲದೆ, ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸುತ್ತೇವೆ. ಚುನಾವಣಾ ಪೂರ್ವ ಕ್ಷೇತ್ರಗಳನ್ನು ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದರು.

RELATED ARTICLES

Latest News