Friday, May 17, 2024
Homeರಾಷ್ಟ್ರೀಯನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ನೋಂದಣಿ ಮಾಡಿಸಿಕೊಳ್ಳದ ಮದರಸಾಗಳಿಗೆ ನೋಟಿಸ್, ದಿನಕ್ಕೆ 10,000 ರೂ. ದಂಡ

ಲಖನೌ,ಅ.25- ರಾಜ್ಯ ಸರ್ಕಾರದಿಂದ ಅನುಮತಿ ಇಲ್ಲವೇ, ನೋಂದಣಿ ಮಾಡಿಸಿಕೊಳ್ಳದೆ ಕಾರ್ಯಾಚರಣೆ ಮಾಡುತ್ತಿರುವ ಮದರಸಾಗಳ ವಿರುದ್ಧ ಕಾನೂನು ಸಮರ ಸಾರಿರುವ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದ್ದು, ದಿನಕ್ಕೆ 10,000 ರೂ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿ ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿವೆ. ಅವುಗಳಲ್ಲಿ 16,000 ಮದರಸಾಗಳು ಮಾನ್ಯತೆ ಪಡೆದಿದ್ದು, 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಮದರಸಾಗಳಿಗೆ ವಿದೇಶಿ ಹಣ ತಲುಪುತ್ತಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ ಬೆನ್ನಲ್ಲೇ ಈ ಹೊಸ ಆದೇಶ ಹೊರಬಿದ್ದಿದೆ. ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯಲ್ಲಿರುವ ಮದರಸಾಗಳು ತನಿಖಾ ವ್ಯಾಪ್ತಿಯಲ್ಲಿವೆ. ಈ ಜಿಲ್ಲೆಯಲ್ಲಿ ನೂರಾರು ಮದರಸಾಗಳು ಸರ್ಕಾರದ ಅನುಮತಿಯಿಲ್ಲದೆ ಕಾರ್ಯಾಚರಣೆ ಮಾಡುತ್ತಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮದರಸಾಗಳ ಮ್ಯಾನೇಜರ್ಗಳಿಗೆ ನೋಟಿಸ್ ಹೊರಡಿಸಲಾಗಿದೆ.

ನೋಟಿಸ್ ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮದರಸಾಗಳು ಮಾನ್ಯತೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ 10,000 ರೂ. ದಂಡ ವಿಧಿಸಲಾಗುವುದು ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಮುಜಾಫರ್‍ನಗರ ಮೂಲ ಶಿಕ್ಷಾ ಅಧಿಕಾರಿ ಶುಭಂ ಶುಕ್ಲಾ ಹೇಳಿದರು.

ಮದರಸಾಗಳಿಗೆ ನೀಡಿದ ನೋಟಿಸ್‍ಗೆ ಸಂಬಂಧಿಸಿದಂತೆ ಭಾರತೀಯ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್, ಶಿಕ್ಷಣ ಇಲಾಖೆಯ ಆದೇಶವನ್ನು ಕಾನೂನುಬಾಹಿರ ಎಂದು ಕರೆದಿದೆ. ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ 10,000 ರೂ. ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ಯೋಜನೆಗಳು ರಾಮ ರಾಜ್ಯದ ಅಡಿಪಾಯದ ಮೇಲೆ ರೂಪುಗೊಂಡಿವೆ ; ಯೋಗಿ

ಲಕ್ನೋದ ಹಿರಿಯ ಅಧಿಕಾರಿಯ ಪ್ರಕಾರ, ರಾಜ್ಯದ ಸುಮಾರು 4,000 ಮದರಸಾಗಳು ವಿದೇಶಿ ಹಣವನ್ನು ಸ್ವೀಕರಿಸುವ ಸ್ಕ್ಯಾಧಿನರ್‍ಅಡಿಯಲ್ಲಿವೆ. ಈ 4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಲ್ಲಿ ನಡೆಯುತ್ತಿವೆ. ಅವುಗಳು ವಿದೇಶದಿಂದ ಹಣವನ್ನು ಪಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮದರಸಾಗಳು ಪಡೆದ ಹಣವನ್ನು ಭಯೋತ್ಪಾದನೆ ಅಥವಾ ಬಲವಂತದ ಧಾರ್ಮಿಕ ಮತಾಂತರದಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಎಸ್ ಐಟಿ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮದರಸಾ ಸಂಬಂಧಿತ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಶಿಕ್ಷಣ ಇಲಾಖೆಗೆ ಯಾವುದೇ ಹಕ್ಕಿಲ್ಲ ಎಂದು ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ.

ಅಲ್ಪಸಂಖ್ಯಾತ ಇಲಾಖೆಗೆ ಮಾತ್ರ ಇದರ ಅಧಿಕಾರವಿದೆ ಎಂದಿರುವ ಜಾವೇದ್, ಮದರಸಾಗಳು ಸಾಮಾನ್ಯ ಶಾಲೆಗಳಂತಲ್ಲ. ಆದ್ದರಿಂದ, ಶಾಲೆಗಳ ನಿಯಮಗಳು, ದಂಡ ಇತ್ಯಾದಿಗಳು ಮದರಸಾಗಳಿಗೆ ಅನ್ವಯಿಸುವುದಿಲ್ಲ. 1995ರಲ್ಲಿ ಶಾಲೆಗಳ ನಿಯಮಗಳು ಮತ್ತು ನಿಬಂಧನೆಗಳಿಂದ ಮದರಸಾಗಳನ್ನು ಪ್ರತ್ಯೇಕಿಸಲಾಯಿತು ಎಂದು ಇಫ್ತಿಕಾರ್ ಅಹ್ಮದ್ ಜಾವೇದ್ ಸ್ಪಷ್ಟಪಡಿಸಿದ್ದಾರೆ.

ಕೆಲವು ವಿಭಾಗಗಳನ್ನು ಗುರಿಯಾಗಿಸಿಕೊಂಡು ಮುಜಾಫರ್‍ನಗರದ ಮದರಸಾಗಳಿಗೆ ನೋಟಿಸ್‍ಗಳನ್ನು ನೀಡಲಾಗಿದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಉತ್ತರ ಪ್ರದೇಶದ ಕಾರ್ಯದರ್ಶಿ ಖಾರಿ ಜಾರ್ಕಿ ಹುಸೇನ್ ಆರೋಪಿಸಿದ್ದಾರೆ. ಮೂರರಿಂದ ಐದು ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ದಿನಕ್ಕೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ಹೇಗೆ ಸಾಧ್ಯ ಎಂದು ಖಾರಿ ಜಾರ್ಕಿ ಪ್ರಶ್ನಿಸಿದ್ದಾರೆ.

RELATED ARTICLES

Latest News