ಬೆಂಗಳೂರು,ಅ.30– ಡೇಟಿಂಗ್ ಸೇವೆ ಹೆಸರಿನಲ್ಲಿ ಮಹಿಳೆಯ ಅಂದಕ್ಕೆ ಮಾರುಹೋದ ವೃದ್ಧರೊಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ.ನಗರದ ಹೊರಮಾವು ನಿವಾಸಿಯಾಗಿರುವ 63 ವರ್ಷದ ವೃದ್ಧರೊಬ್ಬರಿಗೆ ಮಹಿಳೆಯೊಂದಿಗೆ ಡೇಟಿಂಗ್ ಸೇವೆ ಒದಗಿಸುವುದಾಗಿ ಆಸೆ ಹುಟ್ಟಿಸಿ ವಂಚಕರು 32 ಲಕ್ಷ ಹಣ ದೋಚಿರುವುದು ಬೆಳಕಿಗೆ ಬಂದಿದೆ.
ಈ ವೃದ್ಧ ಸೆ.5 ರಿಂದ ಅ.18 ರ ಅವಧಿ ನಡುವೆ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ವಾಟ್ಸಪ್‌ನಲ್ಲಿ ಈ ವೃದ್ಧಗೆ ಮೂವರು ಮಹಿಳೆಯರ ಫೋಟೋ ಕಳುಹಿಸಿದ ವಂಚಕರು ಅವರ ಜೊತೆ ಡೇಟಿಂಗ್ ಸೇವೆ ಕೊಡಿಸುವುದಾಗಿ ಹೇಳಿದ್ದಾರೆ.
ಆ ವೃದ್ಧಗೆ ರಿತಿಕಾ ಎಂಬ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದ್ದು, ನಂತರ ಅವರಿಬ್ಬರು ಆತೀಯತೆ ಬೆಳೆಸಿಕೊಂಡಿದ್ದರು. ತದ ನಂತರ ಶೀಘ್ರದಲ್ಲಿ ಭೇಟಿಯಾಗುವುದಾಗಿ ನಂಬಿಸಿ ಆಗಾಗ್ಗೆ ಬೇರೆ ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಾರೆ.
ಹಣ ಹಾಕಿದ ನಂತರವೂ ಮತ್ತೆ ಮತ್ತೆ ಹಣ ಕೇಳುತ್ತಿದ್ದಾಗ ಆತ ನಿರಾಕರಿಸಿದಾಗ ಆಕೆ ಬೆದರಿಕೆ ಹಾಕಿದ್ದಾಳೆ.ಇದೀಗ ವೃದ್ಧನಿಗೆ ಜ್ಞಾನೋದಯವಾಗಿ ಪೂರ್ವವಿಭಾಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಯಾರು, ಯಾವ ಖಾತೆಗಳಿಗೆ ಹಣ ಹೋಗಿದೆ ಎಂಬುವುದನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
