ನವದೆಹಲಿ, ಜೂ.16- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ನಮೀಬಿಯಾದ ಸ್ಟಾರ್ ಆಲ್ ರೌಂಡರ್ ಡೇವಿಡ್ ವೇಸ್ ಅವರು ತಮ ಸುದೀರ್ಘ ಅವಧಿಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಅಂಟಿಗುವಾದ ಸರ್ ವಿವಿಯನ್ ರಿಚರ್ಡ್‌್ಸ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಟೂರ್ನಿಯ ನಿಮಿತ್ತ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ನಂತರವೇ ಬೇಸರದಿಂದ ತಮ ಕ್ರಿಕೆಟ್ ಜೀವನಕ್ಕೆ ವೈಸ್ ಗುಡ್‌ಬೈ ಹೇಳಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ (ಅಜೇಯ 47 ರನ್) ಹಾಗೂ ಜಾನಿ ಬೈರ್‌ಸ್ಟೋರ್ (31ರನ್) ನೆರವಿನಿಂದ ಮಳೆಬಾಧಿತ ಪಂದ್ಯದಲ್ಲಿ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತ್ತು.
ಈ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ಪರ ಆರಂಭಿಕ ಮೈಕಲ್ ವಾನ್ ಲಿಗೆನ್ (33 ರನ್) ಹಾಗೂ ಡೇವಿಡ್ ವೈಸ್ (27 ರನ್) ಸ್ಫೋಟಕ ಆಟದ ಬಲವಿದ್ದರೂ 84 ರನ್‌ಗಳಿಸಲಷ್ಟೇ ಶಕ್ತವಾಗಿ 7 ವಿಕೆಟ್ ಗಳ ಸೋಲು ಕಂಡಿತು. ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್ ಸೂಪರ್ 8 ಹಂತಕ್ಕೆ ಲಗ್ಗೆ ಇಟ್ಟಿತು.
ನನಗೀಗ 39 ವರ್ಷ ವಯಸ್ಸಾಗಿದ್ದು, ಮುಂದಿನ ಚುಟುಕು ವಿಶ್ವಕಪ್‌ನಲ್ಲಿ ಆಡಲು ಇನ್ನೂ ಎರಡು ವರ್ಷಗಳು ಕಾಯಬೇಕಾಗುತ್ತದೆ. ನಮೀಬಿಯಾ ತಂಡಕ್ಕೆ ನಾನು ಸಾಕಷ್ಟು ಕೊಡುಗೆ ನೀಡಿದ್ದೇನೆ. ಅಲ್ಲದೆ ತಂಡದೊಂದಿಗೆ ನಾನು ಸಾಕಷ್ಟು ಉತ್ತಮ ಸಮಯವನ್ನು ಹೊಂದಿದ್ದೇನೆ ಮತ್ತು ಬಹುಶಃ ಇಂಗ್ಲೆಂಡ್‌ನಂತಹ ವಿಶ್ವ ದರ್ಜೆಯ ತಂಡದ ವಿರುದ್ಧ ವಿಶ್ವಕಪ್‌ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಲು ಇದು ಸರಿಯಾದ ಸಮಯ ಎಂದು ತೋರುತ್ತದೆ’ ಎಂದು ವೈಸ್ ಹೇಳಿದ್ದಾರೆ.