Tuesday, February 11, 2025
Homeರಾಜ್ಯಎಸ್‌‍.ಎಂ.ಕೃಷ್ಣ ಅಗಲಿಕೆಗೆ ಕಣ್ಣೀರಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್‌

ಎಸ್‌‍.ಎಂ.ಕೃಷ್ಣ ಅಗಲಿಕೆಗೆ ಕಣ್ಣೀರಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್‌

DCM D.K. Shivakumar get emotional on passing away of S.M. Krishna

ಬೆಂಗಳೂರು, ಡಿ.10- ಅಂತಾರಾಷ್ಟ್ರೀಯ ಖ್ಯಾತೀಯ ರಾಜಕೀಯ ಮುತ್ಸದ್ದಿ, ಬೆಂಗಳೂರಿಗೆ ಸಿಲಿಕಾನ್‌ ಸಿಟಿ ಖ್ಯಾತಿ ತಂದ ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರೂ ಆದ ಎಸ್‌‍.ಎಂ. ಕೃಷ್ಣ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಂಬನಿ ಮಿಡಿದಿದ್ದಾರೆ.

ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ ಎಸ್‌‍.ಎಂ.ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ. ಕರ್ನಾಟಕ ರಾಜಕೀಯ ರಂಗದ ಧೃವ ನಕ್ಷತ್ರ ಕಳಚಿ ಬಿದ್ದಿದೆ ಎಂದು ಶೋಕ ವ್ಯಕ್ತ ಪಡಿಸಿದ್ದಾರೆ.

ಎಸ್‌‍.ಎಂ.ಕೃಷ್ಣ ಅವರು ಸಜ್ಜನ, ಸುಶಿಕ್ಷಿತ ರಾಜಕಾರಣಿ, ಅಜಾತಶತ್ರು. ದೂರದೃಷ್ಟಿಯ ಕನಸುಗಾರ. ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದವರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾರ್ಪಡಿಸಿದವರು. ಬೆಂಗಳೂರನ್ನು ಸಿಲಿಕಾನ್‌ ಸಿಟಿ, ಐಟಿ- ಬಿಟಿ ನಗರಿಯನ್ನಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ದ ಹಾಗೂ ದೂರದೃಷ್ಟಿಯ ಕೊಡುಗೆ ನೀಡಿದವರು ಎಂದು ಸ್ಮರಿಸಿದ್ದಾರೆ.

ನಾಡಿನ ಹಲವು ಜನಪರ ಯೋಜನೆಗಳಿಗೆ ಅಡಿಗಲ್ಲು ಹಾಕಿದ ಪ್ರವರ್ತಕ. ಮೆಟ್ರೋ ರೈಲು, ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ಹಿಂದಿನ ಶಕ್ತಿ. ಕೈಗಾರಿಕಾ ಹಾಗೂ ಕೃಷಿ ವಲಯಕ್ಕೆ ಸಮಾನ ಅವಕಾಶಗಳನ್ನು ನೀಡಿ ಅಭಿವೃದ್ಧಿಯಲ್ಲಿಯೂ ಸಮತೋಲನ ಕಾಯ್ದುಕೊಂಡ ಸಮಚಿತ್ತದ ಆಡಳಿತಗಾರ. ರಾಜ್ಯದ ವಿಚಾರ ಬಂದಾಗ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲಾ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದಾ ಅಭಿವೃದ್ಧಿ, ರಾಷ್ಟ್ರ ಹಾಗೂ ರಾಜ್ಯದ ಪರವಾಗಿ ಯೋಚನೆ ಮಾಡುತ್ತಿದ್ದ ಕಾಯಕ ಜೀವಿ ಎಂದು ಶಿವಕುಮಾರ್‌ ಅವರು ಕೊಂಡಾಡಿದ್ದಾರೆ.

ದ್ವಾಪರಯುಗದ ಕೃಷ್ಣನ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ರಾಜಕೀಯ ಮುತ್ಸದ್ದಿಯಾಗಿ ‘ಆ’ ಕೃಷ್ಣನಂತೆ ಈ ಎಸ್‌‍.ಎಂ. ಕೃಷ್ಣ ಅವರು ನಮ್ಮ ನಡುವೆ ಬದುಕಿದವರು. ಅವರ ರಾಜಕೀಯ ಉಚ್ಛ್ರಾಯ ಕಾಲದಲ್ಲಿ ಜೊತೆಯಾಗಿ ಇದ್ದವನು ನಾನು. ನನಗೆ ರಾಜಕೀಯ ಮಾರ್ಗದರ್ಶಕರಾಗಿ ಎಡವಿದಾಗ ಕೈ ಹಿಡಿಯುತ್ತಾ, ತಪ್ಪು ಮಾಡಿದಾಗ ತಿದ್ದುತ್ತಾ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿದ್ದ ರಾಜಕೀಯ ದಿಗ್ಧರ್ಶಕ. ಅವರ ಆಲೋಚನೆಗಳು, ಚಿಂತನೆಗಳು ಹೊಸ ಜನಾಂಗಕ್ಕೆ, ಹಳೆ ತಲೆಮಾರಿನನ್ನು ಬೆಸೆಯುವ ಕೊಂಡಿಯಾಗಿದ್ದವು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾವೇರಿ ನೀರು ವಿಚಾರದಲ್ಲಿ ಅಧಿಕಾರ ಹೋದರೂ ಚಿಂತೆಯಿಲ್ಲ ಎಂದು ನಾಡಿನ ಹಿತಕ್ಕಾಗಿ ಹೋರಾಟ ಮಾಡಿದವರು. ಕಾವೇರಿಯ ವರಪುತ್ರನನ್ನು ಈ ನಾಡು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಬಂಧುಗಳು, ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

RELATED ARTICLES

Latest News