ಬೆಂಗಳೂರು,ಡಿ.20- ಮಹಾನಗರಿ ಬೆಂಗಳೂರಿನ ಸಂಚಾರದ ದಟ್ಟಣೆ ತಗ್ಗಿಸಲು ಪ್ರಸ್ತಾವಿತ ಸುರಂಗ ಮಾರ್ಗ ರಸ್ತೆಗಳ ನಿರ್ಮಾಣ ಹಾಗೂ ನಗರದ ಹೊರವಲಯ ಮತ್ತು ನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ 129 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿಂದು ಕೇಂದ್ರಸಚಿವರನ್ನು ಭೇಟಿ ಮಾಡಿರುವ ಡಿ.ಕೆ.ಶಿವಕುಮಾರ್, ಬೆಂಗಳೂರಿನ 3 ಯೋಜನೆಗಳಿಗೆ ಮತ್ತು ಪ್ರಮುಖ ನೀರಾವರಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವಂತೆ ಒತ್ತಾಯಿಸಿದ್ದಾರೆ. 1.20 ಕೋಟಿ ಜನ ನೆಲೆಸಿರುವ ಬೆಂಗಳೂರನ್ನು ವಾಸ ಯೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ಕೈಗಾರಿಕೆಗಳು, ತಂತ್ರಜ್ಞಾನ, ವಿಜ್ಞಾನದ ತವರಾಗಿರುವ ಮಹಾನಗರಿಯ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಮುಖ ಸವಾಲುಗಳನ್ನು ಸರಿಪಡಿಸಬೇಕಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ದಿಕ್ಕುಗಳನ್ನು ಸಂಪರ್ಕಿಸುವ 60 ಕಿ.ಮೀ. ಸುರಂಗಮಾರ್ಗ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು, ಪ್ರತಿ ಕಿ.ಮೀ.ಗೆ 500 ಕೋಟಿ ರೂ.ನಂತೆ ಒತ್ತು ವೆಚ್ಚ 30 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದರಲ್ಲಿ ಮೇಲ್ಸೇತುವೆ ಸೇರಿದಂತೆ ವಿವಿಧ ನಿರ್ಮಾಣಗಳನ್ನೊಳಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಚಿಂತನೆಯಿದೆ ಎಂದು ವಿವರಿಸಿದ್ದಾರೆ.
ಪ್ರತಿಪಕ್ಷಗಳ ಸಂಸದರ ಅಮಾನತು ಸಮರ್ಥಿಸಿಕೊಂಡ ಹೇಮಮಾಲಿನಿ
ಬಿಎಂಆರ್‍ಸಿಎಲ್ ಯೋಜನೆಯಡಿ ಜಾರಿಗೊಂಡಿರುವ ಮೆಟ್ರೋ ಯೋಜನೆ ಮೊದಲ ಹಂತದಲ್ಲಿ 42.3 ಕಿ.ಮೀ. ಸಂಫೂರ್ಣ ಕಾರ್ಯಾಚರಣೆಯಲ್ಲಿದೆ. 2ನೇ ಹಂತದ 75.5 ಕಿ.ಮೀ. ಭಾಗಶಃ ಕಾರ್ಯಾಚರಣೆ ನಡೆಯುತ್ತಿದ್ದು, 2ನೇ ಎ ಹಂತದ 58.19 ಕಿ.ಮೀ. ನಿರ್ಮಾಣದ ಹಂತದಲ್ಲಿದೆ. 3ನೇ ಹಂತದ 44.65 ಕಿ.ಮೀ.ನ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಮಂಜೂರಾತಿ ಬಾಕಿ ಇದೆ. 3 ಎ ಹಂತದಲ್ಲಿ 37 ಕಿ.ಮೀ. ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ.
ಒಟ್ಟು 257.19 ಕಿ.ಮೀ. ಉದ್ದದ ಮೆಟ್ರೊ ಜೊತೆಗೆ ಹೊರವರ್ತುಲ ಪ್ರದೇಶ ಉಪನಗರಗಳನ್ನು ಸಂಪರ್ಕಿಸುವ 129 ಕಿ.ಮೀ. ಉದ್ದದ ಹೆಚ್ಚುವರಿ ಮೆಟ್ರೋ ಮಾರ್ಗಕ್ಕೂ ಅಗತ್ಯ ಆರ್ಥಿಕ ನೆರವು ಮತ್ತು ಪೂರ್ವಾನುಮತಿ ನೀಡುವಂತೆ ಒತ್ತಾಯಿಸಲಾಗಿದೆ. ಮಳೆ ಪ್ರಮಾಣ ಹೆಚ್ಚಾದರೆ ಬೆಂಗಳೂರಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಇದರಿಂದ ಮನೆಗಳಿಗೆ ನೀರು ನುಗ್ಗುತ್ತದೆ. ಇದನ್ನು ಸರಿಪಡಿಸಲು ಜಾಗತಿಕ ಮಾನದಂಡಗಳ ಆಧಾರದ ಮೇಲೆ 3 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲು ವಿಶ್ವಬ್ಯಾಂಕಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಆರ್ಥಿಕ ಇಲಾಖೆ ಮಂಜೂರಾತಿ ದೊರೆಯದೆ ನೆನೆಗುದಿಯಲ್ಲಿದ್ದು, ಅದರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
ವಿವಿಪ್ಯಾಟ್ ಸ್ಲಿಪ್‍ಗಳನ್ನು ಮತದಾರರಿಗೆ ನೀಡಲು ಇಂಡಿಯಾ ಒಕ್ಕೂಟ ಆಗ್ರಹ
ಮೇಕೆದಾಟು ಬಳಿ 67 ಟಿಎಂಸಿ ನೀರು ಸಂಗ್ರಹಿಸುವ ಸಮತೋಲಿತ ಅಣೆಕಟ್ಟು ನಿರ್ಮಾಣ ಯೋಜನೆಗೆ 2019 ರ ಜನವರಿ 18 ರಂದು ಸಿಡಬ್ಲ್ಯೂಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅಗತ್ಯ ಮಂಜೂರಾತಿ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳಿಗೆ ಅಗತ್ಯ ಆರ್ಥಿಕ ನೆರವು ನೀಡಬೇಕು. ಮಹದಾಯಿ ನದಿಗೆ ಕಳಸಾಬಂಡೂರಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅಗತ್ಯ ಮಂಜೂರಾತಿಗಳನ್ನು ಮತ್ತು ಅರ್ಥಿಕ ನೆರವನ್ನು ಭರಿಸುವಂತೆ ಕೇಂದ್ರ ಸಚಿವರಲ್ಲಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.