ನವದೆಹಲಿ,ಜೂ.8- ಲೋಕಸಭಾ ಚುನಾವಣಾ ಫಲಿತಾಂಶ ವಿಭಜನೆ ಮತ್ತು ದ್ವೇಷ ಬಿತ್ತುವವರಿಗೆ ನೀಡಿದ ಜನಾದೇಶವಾಗಿದೆ. ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರೆಕೊಟ್ಟಿದ್ದಾರೆ.
ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪ್ರಾಸ್ತವಿಕವಾಗಿ ಭಾಷಣ ಮಾಡಿದ ಅವರು, ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂಬುದನ್ನು ಜನತೆ ತೋರಿಸಿಕೊಟ್ಟಿದ್ದಾರೆ. ನಾವು ಸಂಘಟಿತರಾಗಿ ಹೋರಾಟ ನಡೆಸಿದರೆ ಎಂತಹ ವಿಭಜಕ ಶಕ್ತಿಗಳನ್ನು ಮಣಿಸುವ ಶಕ್ತಿ ಇದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ ಎಂದು ಹೇಳಿದರು.
ನಾವು ಇನ್ನಷ್ಟು ಒಗ್ಗಟ್ಟಿನಿಂದ ಶ್ರಮ ಹಾಕಿದ್ದರೆ ನಮಗೆ ಮತ್ತಷ್ಟು ಸ್ಥಾನಗಳು ಬರುತ್ತಿದ್ದವು. ಶೇಕಡವಾರು ಮತದಾನದಲ್ಲಿ ನಾವು ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಇದು ಬರುವ ದಿನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟವಾದ ಇಂಡಿಯಾ ಬಣಕ್ಕೆ ಶುಭದಾಯಕದ ಮುನ್ಸೂಚನೆ ಎಂದು ಖರ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಅಧಿಕಾರ ಇರಲಿ ಬಿಡಲಿ ಸಂಸತ್‌ನ ಹೊರಗೆ ಮತ್ತು ಒಳಗೆ ದೇಶದ ಒಳಿತಗಾಗಿ ದಿನದ 24 ಗಂಟೆ, ವಾರದ 7 ದಿನ, ವರ್ಷದ 365 ದಿನಗಳಲ್ಲಿ ನಮ ಹೋರಾಟ ಇದ್ದೇ ಇರುತ್ತದೆ. ಜನತೆಯ ಸಂಕಲ್ಪ, ಇಚ್ಛಾಶಕ್ತಿಗಾಗಿ ಕಾಂಗ್ರೆಸ್ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ಕೇಂದ್ರದಲ್ಲಿ ಕಳೆದ 10 ವರ್ಷಗಳ ಕಾಲ ಅಧಿಕಾರ ನಡೆಸಿದ ನರೇಂದ್ರಮೋದಿ ಸರ್ಕಾರವನ್ನು ಜನತೆ ಸಾರಸಗಾಟಾಗಿ ತಿರಸ್ಕರಿಸಿದ್ದಾರೆ. ಆಡಳಿತ ಪಕ್ಷದ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ವಿರೋಧಿ ಧೋರಣೆಗಳಿಗಾಗಿ ಜನತೆ ನೀಡಿರುವ ತೀರ್ಪನ್ನು ನಾವು ವಿನಮ್ರವಾಗಿ ಗೌರವಿಸುತ್ತೇವೆ ಎಂದರು.
ವಿಭಜನೆ, ದ್ವೇಷ ಮತ್ತು ಧ್ರವೀಕರಣ ಮಾಡುವ ರಾಜಕೀಯವನ್ನು ಭಾರತ ಎಂದಿಗೂ ಒಪ್ಪುವುದಿಲ್ಲ. ಭಾರತ್ ಜೋಡೋ ಯಾತ್ರೆ ನಡೆಸಿದ ಕಡೆಯಲೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯೆಗಳ ಹೆಚ್ಚಳ ಮತ್ತು ಶೇಕಡವಾರು ಮತದಾನದಲ್ಲೂ ಏರಿಕೆಯಾಗಿದೆ ಎಂದರು. ಮಣಿಪುರದಲ್ಲಿ 2 ಸ್ಥಾನ, ನಾಗಲ್ಯಾಂಡ್ ಅಸ್ಸಾಂ, ಮೇಘಾಲಯದಲ್ಲಿ ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. ಅಷ್ಟೇ ಏಕೆ ಮಹಾರಾಷ್ಟ್ರದಲ್ಲೂ ಆಡಳಿತ ಪಕ್ಷವನ್ನು ಮೆಟ್ಟಿ ನಾವು ದೊಡ್ಡ ಪಕ್ಷವಾಗಿ ಹೊರಹೊಮಿದ್ದೇವೆ. ಪ್ರಜಾಪ್ರಭುತ್ವದ ಉಳಿವು, ಸಂವಿಧಾನ ರಕ್ಷಣೆಗಾಗಿ ಎಲ್ಲ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ.
ಎಸ್ಸಿ-ಎಸ್ಟಿ , ಓಬಿಸಿ, ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕಡೆಯೂ ನಾವು ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಕಾಂಗ್ರೆಸ್ ಮೇಲಿದೆ. ಕಾರ್ಯಕರ್ತರು ಇನ್ನಷ್ಟು ಶ್ರಮ ವಹಿಸಬೇಕೆಂದು ಖರ್ಗೆ ಕರೆ ಕೊಟ್ಟರು.
ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರ್ಕಾರ ರಚಿಸಿದ್ದ ರಾಜ್ಯಗಳಲ್ಲಿ ನಮ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಅಂತಹ ಪ್ರತಿಯೊಂದು ರಾಜ್ಯಗಳ ಬಗ್ಗೆ ನಾವು ಶೀಘ್ರದಲ್ಲೇ ಪ್ರತ್ಯೇಕ ಚರ್ಚೆಗಳನ್ನು ನಡೆಸಬೇಕಾಗಿದೆ. ಈ ಮೂಲಕ ನಾವು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಒಲವು ಹೊಂದಿರುವ ರಾಜ್ಯಗಳಾಗಿವೆ, ಅಲ್ಲಿ ನಾವು ಅವಕಾಶಗಳನ್ನು ಹೊಂದಿದ್ದೇವೆ ಎಂದು ಹೇಳಿದರು.