ನವದೆಹಲಿ,ಸೆ.18- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಕೆಲವು ಸದಸ್ಯರು ಇತ್ತೀಚೆಗೆ ನೀಡಿರುವ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಪತ್ರ ಬರೆದ ಬೆನ್ನಲ್ಲೇ, ರಾಹುಲ್ ಗಾಂಧಿಯನ್ನು ನಂಬರ್ ಒನ್ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಮತ್ತೊಮೆ ಪಪ್ಪು ಎಂದು ಗೇಲಿ ಮಾಡಿದ್ದಾರೆ.
ಕಾಂಗ್ರೆಸ್‌ನವರು ರಾಹುಲ್ ಗಾಂಧಿಯನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಪಪ್ಪು ಪಪ್ಪುವಾಗಿಯೇ ಉಳಿದುಬಿಟ್ಟರು. ಇತರರಿಗೆ ಉಪನ್ಯಾಸ ನೀಡುವ ಬದಲು ಮಲ್ಲಿಕಾರ್ಜುನ ಖರ್ಗೆ ಪಪ್ಪುಗೆ ಕಲಿಸಬೇಕು. ನನ್ನ ಕಾಳಜಿಯು ರಾಜಕಾರಣಿಯಾಗಿ ಅಲ್ಲ, ಆದರೆ ಸಿಖ್ ಆಗಿ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಇತ್ತೀಚೆಗೆ ಯುನೈಟೆಡ್ ಸ್ಟೇಟ್‌್ಸಗೆ ಮೂರು ದಿನಗಳ ಭೇಟಿ ನೀಡಿದ್ದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರ ಚೊಚ್ಚಲ ವಿದೇಶಿ ಪ್ರವಾಸದಲ್ಲಿ ರಾಹುಲ್, ಸಿಖ್ ಸಮುದಾಯದ ಬಗ್ಗೆಯೂ ಮಾತನಾಡಿದ್ದಾರೆ.
ಈ ಹೋರಾಟವು ಭಾರತದಲ್ಲಿ ಸಿಖ್‌ಗೆ ಪೇಟಾ ಧರಿಸಲು ಅನುಮತಿಸುವುದೇ ಅಥವಾ ಸಿಖ್‌ಗೆ ಭಾರತದಲ್ಲಿ ಕಡಾವನ್ನು ಧರಿಸಲು ಅನುಮತಿಸುವುದೇ ಅಥವಾ ಸಿಖ್‌ಗೆ ಗುರುದ್ವಾರಕ್ಕೆ ಹೋಗಲು ಅನುಮತಿಸುವುದೇ ಎಂಬುದಾಗಿದೆ. ಇದು ಎಲ್ಲ ಧರ್ಮಗಳ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ ವರ್ಜೀನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಬಿಟ್ಟು ರಾಹುಲ್ ಹೇಳಿಕೆಗೆ ಕಿಡಿ ಕಾರಿದ್ದು ಆ ಬಾಂಬ್‌ಗಳನ್ನು ತಯಾರಿಸುವವರು ಅವನನ್ನು (ಗಾಂಧಿ) ಬೆಂಬಲಿಸುತ್ತಿದ್ದರೆ, ಅವನು ನಂಬರ್ ಒನ್ ಭಯೋತ್ಪಾದಕ. ಅವನು ತನ್ನ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ ಏಕೆಂದರೆ ಅವನು ವಿದೇಶಕ್ಕೆ ಹೋಗಿ ಎಲ್ಲವನ್ನೂ ತಪ್ಪಾಗಿ ಹೇಳುತ್ತಾನೆ ಎಂದು ಅವರು ಹೇಳಿದ್ದಾರೆ.