ನವದೆಹಲಿ,ಮೇ.16- ಉಗ್ರರ ವಿರುದ್ಧ ಸಮರ ಸಾರಿರುವ ಭಾರತ ಮುಂದಿನ ಬಜೆಟ್ ನಲ್ಲಿ 50 ಸಾವಿರ ಕೋಟಿ ರೂ.ಅನ್ನು ರಕ್ಷಣಾ ಬಜೆಟ್‌ನಲ್ಲಿ ಮೀಸಲಿಡುವ ಸಾಧ್ಯತೆ ಇದೆ.ಇದರಲ್ಲಿ ಹೊಸ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಖರೀದಿ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಹಣವನ್ನು ಬಳಸಲು ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಆಪರೇಷನ್ ಸಿಂಧೂರ್ ಶಕ್ತಿ ಪ್ರದರ್ಶನಕ್ಕೆ ಪಾಕಿಸ್ತಾನ ಕಂಗಾಲಾಗಿದೆ. ಈ ಭಯ ಕಂಡು ಭಾರತವು ಸಂಭ್ರಮಪಟ್ಟಿದೆ.
ಇದೇ ಕಾರಣಕ್ಕೆ ಭಾರತ ಪಾಕಿಸ್ತಾನವನ್ನು ಮತ್ತಷ್ಟು ಅಶಾಂತಗೊಳಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೂಲಗಳ ಪ್ರಕಾರ ಭಾರತ ಸರ್ಕಾರ ಆಪರೇಷನ್ ಸಿಂಧೂರ್‌ಗಾಗಿ
ರಕ್ಷಣಾ ಬಜೆಟ್‌ಗೆ ಹೆಚ್ಚುವರಿಯಾಗಿ 50,000 ಕೋಟಿ ರೂ.ಗಳನ್ನು ಸೇರಿಸಬಹುದು. ಅದರ ಪ್ರಸ್ತಾವನೆ ಈಗಾಗಲೇ ಸಿದ್ಧವಾಗಿದೆ.
ಸರ್ಕಾರ ಈ ಹೆಚ್ಚುವರಿ ಮೊತ್ತವನ್ನು ಅನುಮೋದಿಸಿದರೆ, 2025-26ರ ಆರ್ಥಿಕ ವರ್ಷದಲ್ಲಿ ಒಟ್ಟು ರಕ್ಷಣಾ ಬಜೆಟ್ 7 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ.ಇದರಿಂದ ಮುಂದೆ ಮಂಡನೆಯಾಗುವ ಬಜೆಟ್ ನಲ್ಲಿ ರಕ್ಷಣಾ ಬಜೆಟ್ ಹೆಚ್ಚಿನ ಶಕ್ತಿ ಪಡೆಯುವ ಸಾಧ್ಯತೆಯಿದೆ. ಆಪರೇಷನ್ ಸಿಂದೂರ್ ಅನಂತರ ಹೊಸ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಖರೀದಿ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಖರ್ಚು ಮಾಡಲು ನಿರ್ದೇಶಿಸಲಾಗಿದೆ ಎನ್ನಲಾಗಿದೆ..
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಹೆಚ್ಚುವರಿ ಹಣ ಸಿಗುವುದರಿಂದ ಸಶಸ್ತ್ರ ಪಡೆಗಳ ಅಗತ್ಯತೆಗಳು, ಅಗತ್ಯ ಖರೀದಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.ಇದಲ್ಲದೆ, ಈ ಹಣವನ್ನು ಸೇನೆಯ ಇತರ ಅಗತ್ಯಗಳನ್ನು ಪೂರೈಸಲು ಸಹ ಬಳಸಲಾಗುತ್ತದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 50 ಸಾವಿರ ಕೋಟಿ ರೂ.ಗಳ ಹಂಚಿಕೆಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ.
ರಕ್ಷಣಾ ಬಜೆಟ್ ನಿರಂತರವಾಗಿ ಹೆಚ್ಚುತ್ತಿದೆ!
ವಾಸ್ತವವಾಗಿ, 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಕ್ಷಣೆಯನ್ನು ತನ್ನ ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿದೆ. ಮೊದಲ ವರ್ಷದಲ್ಲಿ ಮೋದಿ ಸರ್ಕಾರ ರಕ್ಷಣಾ ಸಚಿವಾಲಯಕ್ಕೆ 2.29 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಿತು, ಇದು ಕಳೆದ ದಶಕದಲ್ಲಿ ಹಂಚಿಕೆ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು. ಈ ಬಾರಿ ಭಾರತದ ಒಟ್ಟು ಬಜೆಟ್‌ನ ಶೇ. 13 ರಷ್ಟು ಭಾಗವನ್ನು ರಕ್ಷಣೆಗೆ ಮೀಸಲಿಡಲಾಗಿದೆ. ಇದು ಎಲ್ಲಾ ಸಚಿವಾಲಯಗಳಲ್ಲಿ ಅತ್ಯಧಿಕವಾಗಿದೆ.ಪಾಕಿಸ್ತಾನದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಮಿಲಿಟರಿ ಸನ್ನದ್ಧತೆಗೆ ಈ ಒತ್ತು ನೀಡಲಾಗುತ್ತಿದೆ.