ನವದೆಹಲಿ,ಮಾ.7- ಅಬಕಾರಿ ನೀತಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಬಾರಿ ಬಾರಿ ಸಮನ್ಸ್ ನೀಡಿದರೂ ಸ್ಪಂದಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಸ್ವತಃ ದೆಹಲಿ ನ್ಯಾಯಾಲಯದಿಂದಲೇ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 16ಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿದೆ.ತಾನು 8 ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸಮನ್ಸ್ ಹೊರಡಿಸಿದೆ.
ದೆಹಲಿ ಸರ್ಕಾರದ ಮದ್ಯ ನೀತಿ ಹಗರಣ ಸಂಬಂಧ ವಿಚಾರಣೆ ನಡೆಸಲು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಈವರೆಗೆ ಎಂಟು ಬಾರಿ ಸಮನ್ಸ್ ಕೊಟ್ಟಿದೆ. ಯಾವುದಕ್ಕೂ ಅವರು ಸ್ಪಂದಿಸಿಲ್ಲ. ಮಾರ್ಚ್ 4ಕ್ಕೆ ಕೊನೆಯದಾಗಿ ಸಮನ್ಸ್ ಕೊಡಲಾಗಿತ್ತು. ಮೊದಲ ಮೂರು ಸಮನ್ಸ್‍ಗೆ ದೆಹಲಿ ಸಿಎಂ ಸ್ಪಂದಿಸದೇ ಇದ್ದಾಗಲೇ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಇಡಿ ದೂರು ಕೊಟ್ಟಿತ್ತು. ನಂತರದ ಐದು ಸಮನ್ಸ್‍ಗಳಿಗೂ ಅವರು ಸ್ಪಂದಿಸುತ್ತಿಲ್ಲ ಎಂದು ಇಡಿ ಮತ್ತೊಮ್ಮೆ ದೂರು ಕೊಟ್ಟ ಹಿನ್ನೆಲೆಯಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 16ಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದೆ.
ಸಮನ್ಸ್‍ಗೆ ಸ್ಪಂದಿಸದ ಕೇಜ್ರಿವಾಲ್ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂಬುದು ಇಡಿ ಒತ್ತಾಯವಾಗಿದೆ. ಆದರೆ, ಇಡಿ ಸಮನ್ಸ್ ಸರಿಯಾದ ಕ್ರಮದಲ್ಲಿ ಇಲ್ಲ. ಅಕ್ರಮವಾಗಿ ಸಮನ್ಸ್ ಕೊಡುತ್ತಿದೆ ಎಂಬುದು ಕೇಜ್ರಿವಾಲ್ ಆಕ್ಷೇಪಣೆ. ಹಾಗೆಯೇ ಕೇಂದ್ರ ಸರ್ಕಾರ ಇಡಿ ಇತ್ಯಾದಿ ಸಂಸ್ಥೆಗಳ ಮೂಲಕ ಎದುರಾಳಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಮುಖ್ಯಮಂತ್ರಿಗಳ ವಾದ.
ವಿಡಿಯೋ ಕಾನೆರೆನ್ಸ್ ಮೂಲಕ ತನ್ನನ್ನು ವಿಚಾರಣೆ ನಡೆಸುವುದಾದರೆ ತಾನು ಸಿದ್ಧ ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿದ್ದಾರೆ. ಆದರೆ, ಕಾನರೆನ್ಸ್ ಕಾಲ್ ಸರಿ ಹೋಗಲ್ಲ. ಆ ಪದ್ಧತಿ ಇಲ್ಲ. ಭೌತಿಕವಾಗಿ ತಾವು ವಿಚಾರಣೆಗೆ ಹಾಜರಾಗಬೇಕು ಎಂಬುದು ಇಡಿ ಅಧಿಕಾರಿಗಳು ಹಿಡಿದಿರುವ ಪಟ್ಟು. ಹೀಗಾಗಿ ಇಡಿ ಅಧಿಕಾರಿಗಳಿಗೆ ಕೇಜ್ರಿವಾಲ್ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಈ ಹಿಂದೆ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಇಬ್ಬರನ್ನೂ ಅದು ಬಂಧಿಸಿದೆ. ಈಗಲೂ ಅವರು ಜೈಲಿನಲ್ಲೇ ಇದ್ದಾರೆ. ತನ್ನನ್ನೂ ಇಡಿ ಜೈಲಿಗೆ ತಳ್ಳಬಹುದು ಎಂಬುದು ಕೇಜ್ರಿವಾಲ್ ಅವರಿಗೆ ಇರುವ ಭಯ.
ಯಾರು ಬಿಜೆಪಿಗೆ ಸೇರಲು ನಿರಾಕರಿಸುತ್ತಾರೋ ಅವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸತ್ಯೇಂದರ್ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಈಗ ಬಿಜೆಪಿ ಸೇರಿದರೆ ನಾಳೆಯೇ ಅವರಿಗೆ ಜಾಮೀನು ಸಿಗುತ್ತದೆ. ನಾನು ಕೂಡ ಇವತ್ತು ಬಿಜೆಪಿ ಸೇರಿದರೆ ಇಡಿಯಿಂದ ಸಮನ್ಸ್ ಬರುವುದು ನಿಂತುಹೋಗುತ್ತದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.