ನವದೆಹಲಿ,ಜೂ.25- ದ್ವಾರಕಾದ ಪ್ರೇಮ್‌ನಗರ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿ ತಿಳಿಸಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಎರಡು ಅಗ್ನಿಶಾಮಕ ಟೆಂಡರ್‌ಗಳನ್ನು ಕಳುಹಿಸಲಾಗಿದೆ ಎಂದರು.
ಮತರನ್ನು ಹೀರಾ ಸಿಂಗ್ ಕಕ್ಕರ್ (48), ಅವರ ಪತ್ನಿ ನೀತು (40) ಮತ್ತು ಅವರ ಮಕ್ಕಳಾದ ರಾಬಿನ್ (22) ಮತ್ತು ಲಕ್ಷಯ್ (21) ಎಂದು ಗುರುತಿಸಲಾಗಿದೆ. ಕಕ್ಕರ್ ಅವರು ವತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು ಮತ್ತು ಮನೆಯು ಕುಟುಂಬದ ಒಡೆತನದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎಫ್‌ಎಸ್ ಅಧಿಕಾರಿಯ ಪ್ರಕಾರ, ಇನ್‌ವರ್ಟರ್‌ನಿಂದ ಬೆಂಕಿ ಸಂಭವಿಸಿದೆ ಮತ್ತು ಅದು ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿರುವ ಪಕ್ಕದ ಸೋಫಾಕ್ಕೆ ಹರಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮುಖ್ಯ ಗೇಟ್ ಒಳಗಿನಿಂದ ಲಾಕ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಅದನ್ನು ಮುರಿದು, ಕುಟುಂಬ ಸದಸ್ಯರನ್ನು ರಕ್ಷಿಸಿದರು ಮತ್ತು ಅವರಲ್ಲಿ ನಾಲ್ವರನ್ನು ರಾವ್ ತುಲಾರಾಮ್ ಸಾರಕ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಹೀರಾ ಸಿಂಗ್ ಕಕ್ಕರ್ ಅವರ ತಾಯಿ ಸೀತಾ ದೇವಿ ಅವರು ಕಟ್ಟಡದ ನೆಲ ಮಹಡಿಯಲ್ಲಿ ಮಲಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಯಿತು ಆದರೆ ಮನೆಯೊಳಗೆ ಸಾಕಷ್ಟು ಹೊಗೆ ಇತ್ತು ಎಂದು ಅಧಿಕಾರಿ ಹೇಳಿದರು.
ಮತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.