ನವದೆಹಲಿ,ಫೆ.17- ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ನಂತರ ಅಭೂತಪೂರ್ವ ಗೆಲುವು ಸಾಧಿಸಿ ದಾಖಲೆ ಬರೆದಿರುವ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯ ನಂತರ ಫೆ.19 ರಂದು ದೆಹಲಿಯ ಮುಖ್ಯಮಂತ್ರಿಯನ್ನು ಪಕ್ಷವು ಹೆಸರಿಸುವ ಸಾಧ್ಯತೆಯಿದೆ. ಶಾಸಕಂಗ ಸಭೆಯ ನಂತರ ಫೆ.20 ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 48 ಬಿಜೆಪಿ ಶಾಸಕರ ಪೈಕಿ 15 ಹೆಸರುಗಳನ್ನು ಶಾರ್ಟ್ನಲಿಸ್ಟ್ ಮಾಡಲಾಗಿದೆ. ಒಂಬತ್ತು ಮಂದಿ ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಸ್ಪೀರ್ಕರ ಪ್ರಮುಖ ಹುದ್ದೆಗಳಿಗೆ ಆಯ್ಕೆಯಾಗಲಿದ್ದಾರೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು 27 ವರ್ಷಗಳ ಸುದೀರ್ಘ ವಿರಾಮದ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿತು. ಮತ್ತೊಂದೆಡೆ, ಎಎಪಿ ತನ್ನ ಹಿರಿಯ ನಾಯಕರಾದ ಅರವಿಂದ್ ಕೇಜಿವಾಲ್, ಮನೀಶ್ ಸಿಸೋಡಿಯಾ ಮತ್ತು ಸೌರಭ್ ಭಾರದ್ವಾಜ್ ತಮ್ಮ ಭದ್ರ ಕೋಟೆಗಳನ್ನು ಕಳೆದುಕೊಂಡು ಕೇವಲ 22 ಸ್ಥಾನಗಳನ್ನು ಮಾತ್ರ ಗಳಿಸಿದೆ.
ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದ ಬಿಜೆಪಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಿಂದ ನಾಯಕನನ್ನು ಆಯ್ಕೆ ಮಾಡಲು ಉನ್ನತ ಮಟ್ಟದ ಸಭೆಗಳನ್ನು ನಡೆಸಿದೆ.
ತೀವ್ರ ಪೈಪೋಟಿಯಿಂದ ಕೂಡಿದ ನವದೆಹಲಿ ಕ್ಷೇತ್ರದಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ಅವರನ್ನು ಸೋಲಿಸಿದ ನಂತರ ಪರ್ವೇಶ್ ವರ್ಮಾ ಅವರು ಬಿಜೆಪಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷದ ಹೈಕಮಾಂಡ್ ಏನು ನಿರ್ಧರಿಸಿದರೂ ಸಂತೋಷದಿಂದ ಸ್ವೀಕರಿಸುವುದಾಗಿ ಪರ್ವೇಶ್ ವರ್ಮಾ ಅವರು ಹೇಳಿದ್ದಾರೆ.
ನಾನು ಆಧ್ಯಾತ್ಮಿಕ ವ್ಯಕ್ತಿ. ಹಾಗಾಗಿ ನಾನು ಹೆಚ್ಚು ಸಂತೋಷವಾಗುವುದಿಲ್ಲ ಮತ್ತು ನಾನು ಹೆಚ್ಚು ದುಃಖಿತನಾಗುವುದಿಲ್ಲ. ಪಕ್ಷದ ಹೈಕಮಾಂಡ್ ಏನು ನಿರ್ಧರಿಸಿದರೂ ನಾನು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ದೆಹಲಿ ಬಿಜೆಪಿಯ ಮಾಜಿ ಮುಖ್ಯಸ್ಥ ವಿಜೇಂದರ್ ಗುಪ್ತಾ ಮತ್ತು ಬಿಜೆಪಿಯ ಹಿರಿಯ ನಾಯಕ ಸತೀಶ್ ಉಪಾಧ್ಯಾಯ ಅವರ ಹೆಸರುಗಳು ಸುತ್ತುತ್ತಿರುವ ಇತರ ಹೆಸರುಗಳು, ಅವರು ಪ್ರಮುಖ ಬ್ರಾಹ್ಮಣ ಮುಖವೂ ಆಗಿದ್ದಾರೆ. ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಪಕ್ಷದ ಪ್ರಮುಖ ಪಂಜಾಬಿ ಮುಖ ಆಶಿಶ್ ಸೂದ್ ಮತ್ತು ಆರ್ಎಸ್ಎಸ್‌ನೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿರುವ ಜಿತೇಂದ್ರ ಮಹಾಜನ್ ಅವರು ಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.