Monday, September 16, 2024
Homeರಾಜ್ಯದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಖಾಸಗಿ ವಾಹಿನಿ ಮುಖ್ಯಸ್ಥನಿಗೆ ಒಕ್ಕಲಿಗರ ಸಂಘ ಎಚ್ಚರಿಕೆ

ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಖಾಸಗಿ ವಾಹಿನಿ ಮುಖ್ಯಸ್ಥನಿಗೆ ಒಕ್ಕಲಿಗರ ಸಂಘ ಎಚ್ಚರಿಕೆ

ಬೆಂಗಳೂರು,ಆ.19- ಮುತ್ಸದ್ದಿ ರಾಜಕಾರಣಿ ನಮ ಸಮುದಾಯದ ಸರ್ವೋಚ್ಛ ನಾಯಕರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಖಾಸಗಿ ವಾಹಿನಿಯ (ಪವರ್‌ ಟಿವಿ) ಮುಖ್ಯಸ್ಥರು ಅವಹೇಳನಕಾರಿ ಹೇಳಿಕೆ ನೀಡಿದ್ದು ಇನ್ನು ಮುಂದೆ ಇಂತಹ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹಿನಿಯ ಮಾಲೀಕರು ದೇವೇಗೌಡರ ಬಗ್ಗೆ ಹಗುರವಾಗಿ ಪದೇಪದೇ ಮಾತನಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಮುಂದುವರೆಸಿದ್ದೇ ಆದರೆ ಸಮುದಾಯದ ವಿವಿಧ ಸಂಘಟನೆಗಳ ಜೊತೆ ದೊಡ್ಡ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ದೇವೇಗೌಡರ ಬಗ್ಗೆ ಅವಹೇಳನಕಾರಿ ಸುದ್ದಿ ಬಿತ್ತರವಾಗಿರುವುದರ ಬಗ್ಗೆ ಒಕ್ಕಲಿಗ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಯವರನ್ನು ಭೇಟಿ ಮಾಡಿ ಮಾರ್ಗದರ್ಶನವನ್ನು ಪಡೆಯಲಾಗುವುದು ಎಂದು ಹೇಳಿದರು.

ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ. ಯಾರೇ ತಪ್ಪು ಮಾಡಿದರೂ ನ್ಯಾಯಾಲಯದ ಮೊರೆ ಹೋಗಬಹುದು. ಇಲ್ಲವೇ ತನಿಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಬಹುದಾಗಿದೆ. ಅದನ್ನು ಬಿಟ್ಟು ತೇಜೋವಧೆ ಮಾಡಬಾರದು. ವಾಹಿನಿಯಲ್ಲಿ ಪ್ರಸಾರವಾಗಿರುವ ಸುದ್ದಿ ತುಂಬಾ ನೋವುಂಟು ಮಾಡಿದೆ. ರಾಜ್ಯ, ರಾಷ್ಟ್ರಕ್ಕಾಗಿ ಆರು ದಶಕಗಳ ಕಾಲ ದೇವೇಗೌಡರು ಸಾಕಷ್ಟು ಹೋರಾಟ ನಡೆಸಿ ಸೇವೆಯನ್ನು ಸಲ್ಲಿಸಿದ್ದಾರೆ. ಅಂತವರ ಬಗ್ಗೆ ಅಗೌರವವಾಗಿ ಮಾತನಾಡುವುದು ಸರಿಯಲ್ಲ. ಯಾವುದೇ ಮಾಧ್ಯಮ ಇದುವರೆಗೂ ಅವರ ಬಗ್ಗೆ ಅಗೌರವವಾದ ಸುದ್ದಿ ಪ್ರಕಟಿಸಿಲ್ಲ. ರಾಷ್ಟ್ರಮಟ್ಟದಲ್ಲೂ ಅವರ ಸಾಧನೆ, ಸೇವೆಯ ಬಗ್ಗೆ ಮೆಚ್ಚುಗೆಯ ಸುದ್ದಿ ಪ್ರಸಾರವಾಗಿದೆ ಎಂದರು.

ಈಗಾಗಲೇ ಅವಹೇಳನಕಾರಿ ರೀತಿ ಹೇಳಿಕೆ ಹಾಗೂ ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಅವರು ಆಗ್ರಹಿಸಿದರು.ಸಂಘದ ಉಪಾಧ್ಯಕ್ಷ ಸ್ಟಾರ್‌ ಪ್ರಕಾಶ್‌ ಮಾತನಾಡಿ, ಒಕ್ಕಲಿಗರ ಸಂಘ ಖಾಸಗಿ ಸುದ್ದಿವಾಹಿನಿಯಲ್ಲಿ ದೇವೇಗೌಡರ ಬಗ್ಗೆ ಪ್ರಸಾರವಾಗಿರುವ ಸುದ್ದಿ ತುಂಬಾ ನೋವು ತಂದಿದೆ. ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಮುತ್ಸದ್ದಿ ಅವರು, ಪಂಜಾಬಿನಲ್ಲಿ ಗೌಡರ ಹೆಸರಿನ್ನು ಭತ್ತದ ಥಳಿಗೆ ಇಟ್ಟಿದ್ದಾರೆ. ಅಂತವರ ಬಗ್ಗೆ ಹಗುರವಾಗಿ ಸುದ್ದಿ ಪ್ರಸಾರ ಮಾಡಿ ಬ್ಲಾಕ್‌ಮೇಲ್‌ ಮಾಡುವುದು ಸರಿಯಲ್ಲ. ಇದನ್ನು ಮುಂದೆ ಸರಿಪಡಿಸಿಕೊಂಡು ಹೋಗದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ನಿರ್ದೇಶಕರಾದ ಕೆ.ವಿ.ಶ್ರೀಧರ್‌ ಮಾತನಾಡಿ, ದೇವೇಗೌಡರನ್ನು ಅವಮಾನಿಸುವುದು ನಾಡಿನ ಜನರನ್ನು ಅವಮಾನಿಸಿದಂತಾಗುತ್ತದೆ. ಟಿಆರ್‌ಪಿಗಾಗಿ ಅಗೌರವಯುತವಾದ ಸುದ್ದಿ ಪ್ರಸಾರ ಮಾಡಬಾರದು. ಅನ್ಯಾಯವಾಗಿದ್ದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಲಿ ಎಂದರು.

ನಿರ್ದೇಶಕ ಡಾ.ಅಂಜನಪ್ಪ ಮಾತನಾಡಿ , ಖಾಸಗಿ ವಾಹಿನಿ ಜನರಿಗೆ ತಪ್ಪು ಸಂದೇಶ ನೀಡಬಾರದು. ಆಗಿರುವುದನ್ನು ಸರಿಪಡಿಸಿಕೊಂಡು ಮತ್ತೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು

ಕೆನಲಿ ಗೌಡ ಮಾತನಾಡಿ, ದೇವೇಗೌಡರು ಯುವಪೀಳೀಗೆಗೆ ಮಾದರಿಯಾಗುವ ವ್ಯಕ್ತಿತ್ವ ಹೊಂದಿರುವವರು. 92ರ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಪರವಾಗಿ ದನಿಯೆತ್ತುತ್ತಿದ್ದಾರೆ. ಪಕ್ಷಾತೀತವಾಗಿ ಗೌರವಿಸುವ ಗೌಡರಿಗೆ ಮಾಡಿರುವ ಅವಮಾನ ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ. ತೇಜೋವಧೆ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ದೇವರಾಜು, ನಿರ್ದೇಶಕ ಲೋಕೇಶ್‌ ನಾಗರಾಜಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES

Latest News