ಬೆಂಗಳೂರು, ಏ.2– ಹಾಲಿನ ದರ, ಡೀಸೆಲ್ ಮೇಲಿನ ಸೆಸ್ ಹೆಚ್ಚಳವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ವಸ್ತುಸ್ಥಿತಿಯನ್ನು ಎಲ್ಲರೂ ಎದುರಿಸಬೇಕು ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸರ್ಕಾರದ ಆಡಳಿತದಲ್ಲಿ ಬೆಲೆ ಏರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬಡವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲವೇ?, ಹಾಲಿನ ದರ ಹೆಚ್ಚಾಗಿದೆ ಎಂದರೆ ಹೇಗೆ?, ಬೆಲೆ ಏರಿಕೆ ಮಾಡಿರುವುದು ನಿಜ. ಆದರೆ ಜನರಿಗೆ ತೊಂದರೆ ಮಾಡಲು ಏರಿಕೆ ಮಾಡಿದೆ ಎಂದರೆ ತಪ್ಪು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ನಿಯಂತ್ರಣ ಕೇಂದ್ರ ಸರ್ಕಾರಕ್ಕಿದೆ ಎಂದರು.
ಹನಿಟ್ರ್ಯಾಪ್ ಸಂಬಂಧಿಸಿದಂತೆ ಎಲ್ಲಾ ವಿಚಾರವನ್ನು ಧೈರ್ಯದಿಂದ ಹೇಳಬೇಕು. ಇಂತಹ ವಿಚಾರವನ್ನು ಶಾಸನ ಸಭೆಯಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಸಚಿವರು ಯಾಕೆ ಸದನದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಲವರ ಬೇಡಿಕೆ ಇರಬಹುದು. ಅದನ್ನು ಹೈಕಮಾಂಡ್ ಮಾಡುತ್ತದೆ. ವಿಧಾನ ಸಭಾಧ್ಯಕ್ಷರು ಕಾನೂನಿನಂತೆ ಕ್ರಮ ಕೈಗೊಂಡಿದ್ದಾರೆ. ಸಭಾಧ್ಯಕ್ಷರ ಪೀಠಕ್ಕೆ ಏಕೆ ಆಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.
ಅಲ್ಲದೆ ಜಾತಿ ಧರ್ಮದ ಆಧಾರದ ಮೇಲೆ ಮಾತನಾಡುವುದು ಸರಿಯಲ್ಲ ಎಂದ ಅವರು, ನಾನು 1983 ರಿಂದಲೂ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವ ಹಾಗೂ ವಿರೋಧಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ನನಗೆ ಆವಕಾಶ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಎಲ್ಲವೂ ದೈವೇಚ್ಛೆ ಎಂದು ದೇಶಪಾಂಡೆ ಹೇಳಿದರು.