Wednesday, July 16, 2025
Homeರಾಜ್ಯರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ದೇವನಹಳ್ಳಿ ಭೂ ಸ್ವಾಧೀನ ರದ್ದು

ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ದೇವನಹಳ್ಳಿ ಭೂ ಸ್ವಾಧೀನ ರದ್ದು

Devanahalli farmers serve 24-hour ultimatum to govt. to shelve land acquisition

ಬೆಂಗಳೂರು,ಜು.15- ಕೊನೆಗೂ ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ತತ್‌ಕ್ಷಣದಿಂದಲೇ ಅನ್ವಯವಾಗುವಂತೆ ಅಧಿಸೂಚನೆಯನ್ನು ರದ್ದುಪಡಿಸಿದೆ.

ಇದರಿಂದಾಗಿ ಕಳೆದ ಹಲವು ತಿಂಗಳಿನಿಂದ ತಮ ಜಮೀನು ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದ ಅನ್ನದಾತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಹೆಚ್‌.ಕೆ.ಪಾಟೀಲ್‌, ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ, ಭೈರತಿ ಸುರೇಶ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹದ್‌, ಕಾನೂನು ಸಲಹೆಗಾರ ಪೊನ್ನಣ್ಣ, ಅಡ್ವೋಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ನಟ ಪ್ರಕಾಶ್‌ ರಾಜ್‌, ಬಡಗಲಪುರ ನಾಗೇಂದ್ರ, ದೇವನಹಳ್ಳಿ ರೈತ ಮುಖಂಡರು ಭಾಗವಹಿಸಿದ್ದರು.

ಚನ್ನರಾಯಪಟ್ಟಣದಲ್ಲಿ ರಾಜ್ಯ ಸರ್ಕಾರ ಒಟ್ಟು 1777 ಎಕರೆ ಜಮೀನನಲ್ಲಿ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ(ಕೆ ಐಎಡಿಬಿ) ಭೂಸ್ವಾಧೀನಕ್ಕೆ ಮುಂದಾಗಿತ್ತು. ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಬೆಲೆ ಬಾಳುವ ನಮ ಜಮೀನನ್ನು ನೀಡುವುದಿಲ್ಲ ಎಂದು ಹೋರಾಟ ನಡೆಸಿದ್ದರು. ನಾಲ್ಕು ಬಾರಿ ಸಭೆ ನಡೆಸಿದ್ದರೂ ಫಲಪ್ರದವಾಗಿರಲಿಲ್ಲ.

ಅಂತಿಮವಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವುದಾಗಿ ಖುದ್ದು ಘೋಷಣೆ ಮಾಡಿದರು. ಈ ಹಿಂದೆ ನಡೆದ ಸಭೆಯಲ್ಲಿ ಭೂಮಿ ನೀಡುವ ಸಂಬಂಧ ರೈತರಲ್ಲೇ ಎರಡು ಗುಂಪು ಸೃಷ್ಟಿಯಾಗಿತ್ತು. ಒಂದು ಗುಂಪು ಭೂಮಿ ನೀಡಲು ಒಪಿದ್ದರೆ, ಮತ್ತೊಂದು ಗುಂಪು ಭೂಮಿ ನೀಡಲು ವಿರೋಧಿಸಿತ್ತು.

ಈ ಸಂಬಂಧ ರೈತ ಮುಖಂಡರ ಜೊತೆ ಸಭೆ ನಡೆಸಿರುವ ಸಿಎಂ, ರೈತರ ಬೇಡಿಕೆಗೆ ಸ್ಪಂದಿಸಿದ್ದಾರೆ. ಭೂ ಸ್ವಾಧೀನವನ್ನು ಕೈ ಬಿಟ್ಟಿದ್ದೇವೆ ಎಂದು ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬಂದರೆ ಒಪ್ಪಂದ ಮೇಲೆ ತೆಗೆದುಕೊಳ್ಳುತ್ತೇವೆ. ನಮಗೆ ಕೈಗಾರಿಕೆ ಬೆಳೆಯಬೇಕು. ಭೂಮಿ ಕೊಡುವ ರೈತರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದು ಹೇಳಿದರು.ಹಿಂದೆ ಮಾಡಿದ ಅಧಿಸೂಚನೆಯನ್ನು ರದ್ದು ಮಾಡುತ್ತಿದ್ದೇವೆ. ಇದನ್ನು ರೈತರು ಹಾಗೂ ಹೋರಾಟಗಾರರು ಸ್ವಾಗತಿಸಿದ್ದಾರೆ. ಬೆಂಗಳೂರಿಗೆ ಹತ್ತಿರವಾಗಿರುವುದರಿಂದ ಕೃಷಿ ಭೂಮಿ ಇರುವುದರಿಂದ ಅಧಿಸೂಚನೆ ರದ್ದು ಮಾಡಿದ್ದು, ಎಲ್ಲದಕ್ಕೂ ಈ ತೀರ್ಮಾನ ಅನ್ವಯಿಸುವುದಿಲ್ಲ ಎಂದರು.

1,777 ಎಕರೆ ಡಿನೋಟಿಫಿಕೇಷನ್‌ ಕೈಬಿಟ್ಟಿದ್ದೇವೆ. ಆದರೆ ಭೂಮಾಲೀಕರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದಾದರೆ ಖರೀದಿಸುತ್ತೇವೆ. ಬಲವಂತವಾಗಿ ಖರೀದಿಸುವುದಿಲ್ಲ. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು ಎಂಬುದು ನಮ ಆಶಯ. ಸರ್ಕಾರದ ನಿರ್ಧಾರ ದೇವನಹಳ್ಳಿ ಪ್ರದೇಶಕ್ಕೆ ಮಾತ್ರ ಸಿಮೀತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಿಮಾನ ನಿಲ್ದಾಣ ಸಮೀಪ ಇರುವುದರಿಂದ ಹಾಗೂ ಗ್ರೀನ ಬೆಲ್ಟ್ ನಲ್ಲಿ ಇರುವುದರಿಂದ ಸ್ವಾಧೀನಪಡಿಸಿಕೊಳ್ಳುವುದು ಬೇಡ ಎಂಬುವುದು ರೈತರ ಬೇಡಿಕೆಯಾಗಿತ್ತು. ಸರ್ಕಾರ ಈಗಾಗಲೇ ರೈತರು, ಹೋರಾಟಗಾರರರಿಂದ ಅಹವಾಲುಗಳನ್ನು ಆಲಿಸಿದೆ. ಕೆ.ಎಚ್‌.ಮುನಿಯಪ್ಪ ಅವರು ಕೂಡಾ ರೈತರ ಪರವಾಗಿ ವಾದಿಸಿದ್ದರು ಎಂದರು.ರೈತರ ಹೋರಾಟದಲ್ಲಿ ಪ್ರಗತಿಪರ ಸಂಘಟನೆಗಳು ಭಾಗಿಯಾಗಿದ್ದವು. ಪ್ರಗತಿಪರ ಹಾಗೂ ಎಡ ಸಂಘಟನೆಗಳು, ದಲಿತ ಸಂಘಟನೆಗಳು ಭಾಗಿಯಾಗಿದ್ದವು. ಇದೊಂದು ವಿಶಿಷ್ಟವಾದ ಐತಿಹಾಸಿಕವಾದ ಹೋರಾಟವಾಗಿತ್ತು. ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಸರ್ಕಾರ ಇದೀಗ ತೀರ್ಮಾನಕ್ಕೆ ಬಂದಿದೆ ಎಂದರು.

ಕರ್ನಾಟಕ ಕೈಗಾರಿಕಾಭಿವೃದ್ದಿ ಮಂಡಳಿ(ಕೆಐಎಡಿಬಿ)ಯಿಂದ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ 13 ಗ್ರಾಮಗಳ 1777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. 2021ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 2022ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

ಪ್ರಕಾಶ್‌ ರಾಜ್‌ ಮೆಚ್ಚುಗೆ:
ಭೂಸ್ವಾಧೀನ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರದ ನಡೆಯನ್ನು ನಟ ಪ್ರಕಾಶ್‌ ರಾಜ್‌ ಪ್ರಶಂಸಿದ್ದಾರೆ. ಇದೇ ವೇಳೆ ಮಾತನಾಡಿ ಱಱಮುಖ್ಯಮಂತ್ರಿ ಅವರ ಸಾಮಾಜಿಕ ನ್ಯಾಯ ಕೇವಲ ನುಡಿಯಲ್ಲಿ ಮಾತ್ರವಲ್ಲ ನಡೆಯಲ್ಲೂ ಅದನ್ನು ಇಂದು ಅವರು ತೋರಿಸಿಕೊಟ್ಟಿದ್ದಾರೆೞೞ ಎಂದು ಪ್ರಕಾಶ್‌ ರಾಜ್‌ಅವರುಹೇಳಿದರು.

RELATED ARTICLES

Latest News