Sunday, November 24, 2024
Homeರಾಜ್ಯKRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

ಬೆಂಗಳೂರು, ಸೆ.25- ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು ಪರಿಹಾರಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದಲ್ಲಿನ ವಾಸ್ತವಾಂಶ ಗಳನ್ನು ಅರಿಯಲು ತಜ್ಞರ ಸಮಿತಿ ಕಳುಹಿಸುವ ಬಗ್ಗೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರಿಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಮನವಿ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ಸಂಕಷ್ಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಸ್ತವಾಂಶಗಳನ್ನು ಆಧರಿಸಿದ 5 ಪುಟಗಳ ಪತ್ರವನ್ನು ಬರೆದಿದ್ದು, ಅದರಲ್ಲಿ ಸಂಕಷ್ಟ ಪರಿಹಾರಕ್ಕೆ ಸಲಹೆಗಳನ್ನು ನೀಡಿ, ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಕೆಆರ್‍ಎಸ್ ಜಲಾಶಯದಲ್ಲಿ ನೀರಿಲ್ಲದಿರುವ ಫೋಟೋವನ್ನು ಪ್ರದ ರ್ಶಿಸಿ ಭಾವುಕರಾಗಿ ಮಾತನಾಡಿದ ದೇವೇಗೌಡರು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಮುಂದಿನ ಬೇಸಿಗೆಯವರೆಗೆ ಕುಡಿಯುವ ನೀರು ಮತ್ತು ಬೆಳೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಸಂಕಷ್ಟ ಸೂತ್ರ ರೂಪಿಸಬೇಕು. ಇದಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯವನ್ನು ಹೊರತುಪಡಿಸಿದ ಐವರು ಪರಿಣಿತರ ತಂಡವನ್ನು ಉಭಯ ರಾಜ್ಯಗಳಿಗೆ ಕಳುಹಿಸಿ ವಾಸ್ತವಾಂಶದ ವರದಿ ಪಡೆದು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಈಗ ಆಗಿರುವಂತೆ ಮುಂದೆ ತೊಂದರೆ ಉಂಟಾಗದಂತೆ ಪರಿಹಾರ ರೂಪಿಸಬೇಕು ಎಂದು ಹೇಳಿದರು.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

9 ಅಂಶಗಳ ಸಲಹೆಗಳನ್ನು ಪ್ರಧಾನಿಯವರಿಗೆ ಪತ್ರದಲ್ಲಿ ನೀಡಲಾಗಿದೆ. ತಜ್ಞರ ಸಮಿತಿ ನೀಡಿರುವ ವರದಿಯನ್ನು ಆಧಾರಿಸಿ ಸಂಕಷ್ಟ ಸೂತ್ರವನ್ನು ರೂಪಿಸಬೇಕು ಇದು ಮಧ್ಯಂತರ ಪರಿಹಾರವಾಗಲಿದೆ ಎಂದು ಹೇಳಿದರು. ಎಲ್ಲಾ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಅಗತ್ಯ ಇರುವ ನೀರಿನ ಪ್ರಮಾಣ ಸೇರಿದಂತೆ ವಾಸ್ತವ ಸಂಗತಿಗಳನ್ನು ಸ್ವತಂತ್ರವಾದ ಬಾಹ್ಯ ಏಜೆನ್ಸಿ ನೇಮಿಸುವ ಮೂಲಕ ಕೇಂದ್ರ ಸರ್ಕಾರ ವರದಿ ಪಡೆಯಬೇಕು. ಆ ವರದಿ ಆಧರಿಸಿ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೂಕ್ತ ನಿರ್ದೇಶನ ನೀಡಬೇಕು.

15 ದಿನಗಳಿಗೊಮ್ಮೆ ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೆ ಭೇಟಿ ನೀಡಿ ವಾಸ್ತವ ಸಂಗತಿಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳಬೇಕು. ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಕೋರಿದರು.

ಕಾವೇರಿ ವಿಷಯದಲ್ಲಿ ಜನರು ಸಂಕಷ್ಟಕ್ಕೀಡಾಗಿರುವ ಬಗ್ಗೆ ಕುಮಾರಸ್ವಾಮಿಯವರು ಮಾಹಿತಿ ಸಂಗ್ರಹಿಸಿದ್ದಾರೆ. ಅದರ ಮಾಹಿತಿಯನ್ನು ಪ್ರಧಾನಿಗೆ ತಲುಪಿಸಿದ್ದೇವೆ. ತಮಿಳುನಾಡಿನ ಸಹೋದರರು ಕರ್ನಾಟಕದಲ್ಲಿ ನೀರಿಲ್ಲದಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಬದುಕಬೇಕು ನಮ್ಮನ್ನು ಬದುಕಿಸಬೇಕು ಎಂದರು.

ಉಭಯ ರಾಷ್ಟ್ರದಲ್ಲಿರುವ ವಾಸ್ತವ ಸ್ಥಿತಿಗತಿ ಅರಿಯಲು ತಜ್ಞರ ತಂಡವನ್ನು ಕಳುಹಿಸಲು ಕೋರಿ ರಾಜ್ಯಸಭೆಯಲ್ಲಿ ಮನವಿ ಮಾಡಿದ್ದೆ. ರಾಜ್ಯಸಭೆಯ ಅಧ್ಯಕ್ಷರು ಮನವಿಯನ್ನು ತಳ್ಳಿಹಾಕಿದರು. ನಾಳಿನ ಬಂದ್ ವಿಚಾರದಲ್ಲಿ ಯಾರ್ಯಾರು ಏನೇನು ಮಾತನಾಡುತ್ತಾರೆ ಎಂಬ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದರು.


ಕಳೆದ 60 ವರ್ಷದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಿಲುವನ್ನು ನೋಡಿದ್ದೇನೆ. ರಾಜಕೀಯ ಲಾಭಕ್ಕಾಗಿ ಕಾವೇರಿ ವಿಚಾರವನ್ನು ಬಳಸಿಕೊಂಡಿಲ್ಲ. 2 ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ನಾಡಿನ ಸಂಕಷ್ಟ ಪರಿಹಾರಕ್ಕಾಗಿ ಹೋರಾಟ ಮಾಡಿದ್ದೇನೆ. ತಮಿಳುನಾಡಿನ 40 ಸಂಸದರು ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ. ನಮ್ಮಲ್ಲಿ 28 ಸಂಸದರು ಇದ್ದರೂ ಮೂಲೆಗುಂಪುಗಳಾಗುತ್ತಾರೆ ಒಗ್ಗಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಡುಗುತ್ತಿದ್ದ ಕೈಯಲ್ಲಿ ಒಂದು ಲೋಟ ಹಿಡಿದು ಕಾವೇರಿ ವಿಚಾರ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದೆ. ಆಗ ರಾಜ್ಯ ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವಿರಪ್ಪ ಮೋಯ್ಲಿ, ಎಸ್.ಎಂ ಕೃಷ್ಣ. ಕೆ.ಎಚ್. ಮುನಿಯಪ್ಪ ಅವರು ಯಾರು ಕೂಡ ಮಾತನಾಡಲಿಲ್ಲ. ಆಗಿನ ಸಂಸದರಾಗಿದ್ದ ಅನಂತ್‍ಕುಮಾರ್ ಅವರ ಸಹಕಾರವನ್ನು ಕೋರಿದ್ದೆ. ಅವರು ಪಕ್ಷದ ತೀರ್ಮಾನ ಪಡೆದು ನಾಳೆ ಹೇಳುವುದಾಗಿ ಹೇಳಿದ್ದರು. ಆದರೆ ಮರುದಿನ ಬರಲೇ ಇಲ್ಲ ಸ್ಮರಿಸಿದರು. ಅಧಿಕಾರಕ್ಕಾಗಿ ನಮ್ಮ ಪಕ್ಷ ಹೋರಾಡುತ್ತಿಲ್ಲ. ಸ್ವಾಭಿಮಾನದಿಂದ ಜನರ ಹಿತ ಕಾಪಾಡಲು ಹೋರಾಡುತ್ತಿದೆ ಎಂದು ಹೇಳಿದರು.

ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ : ಪ್ರಿಯಾಂಕ್ ಖರ್ಗೆ

ಬಂದ್‍ಗೆ ಬೆಂಬಲ:
ನಾಳೆ ನೀಡಿರುವ ಬೆಂಗಳೂರು ಬಂದ್‍ಗೆ ಕುಮಾರಸ್ವಾಮಿ ಅವರು ಬೆಂಬಲ ಘೋಷಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕೆಂದು ಗೌಡರು ಸಲಹೆ ಮಾಡಿದರು.ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಇಂದು ಪ್ರಸ್ತಾಪಿಸುವುದಿಲ್ಲ. ಮೈತ್ರಿ ಕುರಿತಂತೆ ರಾಜಕೀಯಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರ ಬುಧವಾರ ತಿಳಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮರಾಸ್ವಾಮಿ, ಮಾಜಿ ಸಂಸದ ಕುಪೇಂದ್ರರೆಡ್ಡಿ, ಬಿಎಂ ಪಾರುಕ್, ತಿಪ್ಪೆಸ್ವಾಮಿ, ಮಾಜಿ ಸದಸ್ಯ ರಮೇಶ್ ಗೌಡ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಉಪಸ್ಥಿತರಿದ್ದರು.

RELATED ARTICLES

Latest News