ಬೆಂಗಳೂರು,ಸೆ.27- ನಾವು ಎಲ್ಲೇ ಇದ್ದರೂ ನಮ್ಮ ಪಕ್ಷದ ಜಾತ್ಯತೀತ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಅಲ್ಪಸಂಖ್ಯಾತರನ್ನು ಕೈಬಿಟ್ಟಿಲ್ಲ. ಮುಂದೆಯೂ ಕೈ ಬಿಡುವುದಿಲ್ಲ. ಅವರನ್ನು ರಕ್ಷಣೆ ಮಾಡುತ್ತೇವೆ. ಪಕ್ಷದ ಜಾತ್ಯತೀತ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದ್ದು, ಇನ್ನು ಪ್ರಧಾನಿ ಅವರೊಂದಿಗೆ ಚರ್ಚೆ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ಎರಡೂ ಪಕ್ಷಗಳ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಆನಂತರ ಸೀಟು ಹಂಚಿಕೆ ಮತ್ತು ಮುಂದಿನ ಮೈತ್ರಿ ಸ್ವರೂಪದ ಬಗ್ಗೆ ನಿರ್ಧಾರವಾಗಲಿದೆ ಎಂದರು.
ಕಳೆದ 60 ವರ್ಷದ ರಾಜಕೀಯ ಜೀವನದಲ್ಲಿ ಜಾತ್ಯತೀತ ನಿಲುವಿಗೆ ಬದ್ದವಾಗಿ ರಾಜಕೀಯ ಮಾಡಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಟ್ಟಿಲ್ಲ ಎಂದು ಹೇಳಿದರು. ಅವಕಾಶವಾದಿ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಜಾತ್ಯತೀತೆ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ನವರು ರಾಜ್ಯ ಮತ್ತು ರಾಷ್ಟ್ರದಲ್ಲಿ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸಲು ಮಾಡಿರುವ ಪ್ರಯತ್ನಗಳ ಬಗ್ಗೆ ಹತ್ತು ಹಲವು ನಿದರ್ಶನಗಳನ್ನು ನೀಡಬಲ್ಲೆ ಎಂದು ಹೇಳಿದರು.
ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ನೇಪಾಳ ಆಟಗಾರರು
ಜಾತ್ಯತೀತ ನಿಲುವಿನಲ್ಲಿ ಕಿಂಚಿತ್ತೂ ರಾಜೀ ಮಾಡಿಕೊಂಡಿಲ್ಲ. ಮುಂದೆ ಮಾಡಿಕೊಳ್ಳುವುದೂ ಇಲ್ಲ. ಬಿಜೆಪಿಯೊಂದಿಗಿನ ಮೈತ್ರಿ ವಿಚಾರದ ಬಗ್ಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆ ಮಾತನಾಡಿದ್ದೇನೆ. ಕದ್ದುಮುಚ್ಚಿ ಮಾತನಾಡಿಲ್ಲ. ಆ ವಿಚಾರವನ್ನು ಬಹಿರಂಗಪಡಿಸಲಾಗಿದೆ.
ಆನಂತರವೇ ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದ ಅವರು,ಬಿಜೆಪಿಯೊಂದಿಗಿನ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿಗೆ ಯಾರು ಹೊಣೆ? ಏಕೆ ಹೀಗಾಯ್ತು ಎಂದು ಪ್ರಶ್ನಿಸಿದರು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಡಳಿತ ನಡೆಸುವಾಗ 17 ಶಾಸಕರನ್ನು ಮುಂಬೈಗೆ ಕಳುಹಿಸಿ ಸರ್ಕಾರದ ಪತನಕ್ಕೆ ಕಾರಣರಾದವರು ಯಾರು? ಬಿಜೆಪಿ ಸರ್ಕಾರ ರಚನೆಗೆ ಯಾರು ಅವಕಾಶ ಮಾಡಿಕೊಟ್ಟರು ಎಂಬುದು ಚರ್ಚೆಯಾಗಲಿ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರೇ ನಮ್ಮನ್ನು ಒತ್ತಾಯಿಸಿದ್ದರು. ನಾವು ಬೇಡ ಎಂದು ಅವರು ಬಲವಂತ ಮಾಡಿ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿ ಮಾಡಿದರು. ನಂತರ ಅವರೇ ಸರ್ಕಾರವನ್ನು ತೆಗೆದರು ಎಂದು ಆರೋಪಿಸಿದರು.
ನಮ್ಮ ಪಕ್ಷದ ಎಲ್ಲ ವಿಧಾನಸಭೆ, ವಿಧಾನಪರಿಷತ್ನ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಮೈತ್ರಿ ಮಾತುಕತೆ ನಡೆಸಲಾಗಿದೆ ಎಂದ ಅವರು, ಜಾತ್ಯತೀತ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಎಷ್ಟರ ಮಟ್ಟಿಗೆ ರಾಷ್ಟ್ರದಲ್ಲಿ ಉಳಿಸಿದೆ ಎಂದು ಅವರು ಪ್ರಶ್ನಿಸಿದರು. ರಾಜಕೀಯ ಪಕ್ಷದ ಮಡಿವಂತಿಕೆಯಿಂದ ಹೊರಬಂದು ನೇರ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಬಂಧವಿಲ್ಲದೆ ಸ್ವಚ್ಛವಾಗಿದ್ದೇವೆ ಎಂಬ ಒಂದು ರಾಜಕೀಯ ಪಕ್ಷವಿದ್ದರೆ ಯಾರು ಬೇಕಾದರೂ ಪ್ರಶ್ನಿಸಬಹುದು.
ಪಶ್ಚಿ ಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಎಡಪಕ್ಷಗಳ ಕೆಲವು ಮುಖಂಡರು ಬಿಜೆಪಿ ಜೊತೆ ಕೆಲಸ ಮಾಡಿರುವುದು ಬಹಿರಂಗವಾಗಿಲ್ಲವೇ? ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ರಾಜ್ಯಸಭೆಗೆ ಸ್ರ್ಪಧಿಸಿದ್ದಾಗ 8 ಮಂದಿ ಪಕ್ಷಾಂತರ ಮಾಡಿ ಅವರನ್ನು ಸೋಲಿಸಲಿಲ್ಲವೇ? ಆಗ ಕಾಂಗ್ರೆಸ್ನ ಜಾತ್ಯತೀತ ನಿಲುವು ಎಲ್ಲಿ ಹೋಗಿತ್ತು? ಪ್ರಾದೇಶಿಕ ಪಕ್ಷವನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಫಾರೂಕ್ ಅಬ್ದುಲ್ಲಾ ಸರ್ಕಾರವನ್ನು ತೆಗೆದವರು ಯಾರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ಹಿಂದೆ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಮಂಗಳೂರಿನಲ್ಲಿ ಇಬ್ಬರು ಮುಸ್ಲಿಂ ಮುಖಂಡರ ಹತ್ಯೆಯಾಗಿತ್ತು. ಅಲ್ಲಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ಹಂತಕರಿಗೆ ಜೀವಾವ ಶಿಕ್ಷೆಯಾಯಿತು. ಹೀಗೆ ನಾವು ಎಲ್ಲೇ ಇದ್ದರೂ ಅಲ್ಪಸಂಖ್ಯಾತರನ್ನು ಕೈಬಿಟ್ಟಿಲ್ಲ ಎಂದು ಗೌಡರು ಸಮರ್ಥಿಸಿಕೊಂಡರು.
ಮೈತ್ರಿ ವಿಚಾರವನ್ನು ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ : ಹೆಚ್ಡಿಕೆ ಸ್ಪಷ್ಟನೆ
ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧ:
ಕೇರಳದ ನಮ್ಮ ಪಕ್ಷದ ಸ್ನೇಹಿತರು ಕರ್ನಾಟಕದಲ್ಲಿ ಪಕ್ಷವನ್ನು ಉಳಿಸಿ-ಬೆಳೆಸುವುದಾದರೆ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವೆ. ಸಂಕಷ್ಟ ಪರಿಸ್ಥಿತಿಯಲ್ಲಿ ಪಕ್ಷವನ್ನು ಉಳಿಸಿ ಬೆಳೆಸಬೇಕಿದೆ. ನಮ್ಮ ಪಕ್ಷದ ಶಾಸಕರಾದ ಕರ್ರೆಮ್ಮ ಅವರು ಪಕ್ಷ ಬಿಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ಲಿದೆ ನಾಗಾಲೋಟ:
ರಾಜ್ಯದಲ್ಲಿ ಕಾಂಗ್ರೆಸ್ನ ನಾಗಾಲೋಟ ಎಲ್ಲಿದೆ ಎಂದು ಪ್ರಶ್ನಿಸಿದ ಗೌಡರು, ಕಾವೇರಿ ನೀರು ಓಡುತ್ತಿದೆ… ಓಡುತ್ತಿದೆ ಎಂದು ಹೇಳಿದರು. ಕಾವೇರಿ ನದಿನೀರು ನಿರ್ವಹಣಾ ಸಮಿತಿ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮಾಡಿರುವ ಶಿಫಾರಸು ಖುಷಿ ತಂದಿದೆ ಎಂದು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಮಿತಿಯ ಶಿಫಾರಸ್ಸನ್ನು ಸ್ವಾಗತಿಸಿದ್ದಾರೆ. ನೀರನ್ನು ಉಳಿಸಿ ರಾಜ್ಯದ ಹಿತ ಕಾಪಾಡಲು ಹೋರಾಟ ನಡೆಸಿದೆ. ಆದರೆ ಅವರಿಗೆ ತಮಿಳುನಾಡಿನ ಸ್ಟಾಲಿನ್ ಅವರು ಗೆಲ್ಲಬೇಕಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಂಜುನಾಥ್, ಟಿ.ಎ.ಶರವಣ, ಬಿ.ಎಂ.ಫಾರೂಖ್, ಮಂಜೇಗೌಡ, ವಿಧಾನಪರಿಷತ್ ಮಾಜಿ ಸದಸ್ಯರಾದ ರಮೇಶ್ ಗೌಡ, ಕೆ.ಪಿ.ಶ್ರೀಕಂಠೇಗೌಡ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.