ಹೈದರಾಬಾದ್,ಸೆ.24- ತೆಲಂಗಾಣದ ಖಮಂ ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ.ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದೆ.
ಖಮಂ ಜಿಲ್ಲೆಯ ನಿವಾಸಿ ದೋಂತು ಪದಾವತಿ ಅವರು ಸೆ. 19 ರಂದು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಂಬಾಕು ಪತ್ತೆಯಾಗಿದೆ. ಇತರ ಭಕ್ತರಂತೆ ಪದಾವತಿ ತನ್ನ ಕುಟುಂಬ ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಪ್ರಸಾದವನ್ನು ಮರಳಿ ತಂದರು. ಲಡ್ಡು ಹಂಚಲು ಮುಂದಾದಾಗ ಸಣ್ಣ ಪೇಪರ್‌ನಲ್ಲಿ ಸುತ್ತಿದ ತಂಬಾಕಿನ ತುಂಡುಗಳು ಕಂಡು ಗಾಬರಿಯಾಯಿತು ಎಂದು ಪದಾವತಿ ತಮ ನೋವನ್ನು ಹಂಚಿಕೊಂಡಿದ್ದಾರೆ.
ಪ್ರಸಾದವು ಪವಿತ್ರವಾಗಿರಬೇಕು ಮತ್ತು ಅಂತಹ ಪ್ರಮಾದವು ಹೃದಯ ವಿದ್ರಾವಕವಾಗಿದೆ ಎಂದು ಅವರು ವಿಷಾದಿಸಿದ್ದಾರೆ. ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿರುವುದು ಇದೇ ಮೊದಲಲ್ಲ. 2012ರಲ್ಲೂ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಗಮನಾರ್ಹ. ಈಗಾಗಲೇ ತುಪ್ಪದಲ್ಲಿ ಕಲಬೆರಕೆ ವಿಷಯ ವಿವಾದವಾಗಿದ್ದು, ಈ ಬೆನ್ನಲ್ಲೇ ಗುಟ್ಕಾ ಪತ್ತೆಯಾಗಿದೆ ಎಂಬ ಆರೋಪವೂ ಚರ್ಚೆಗೆ ಗ್ರಾಸವಾಗಿದೆ.
ಆಂಧ್ರಪ್ರದೇಶದ ತಿರುಪತಿ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡು ಈಗ ಮಹಾ ವಿವಾದಕ್ಕೆ ಕಾರಣವಾಗಿದೆ. ಲಡ್ಡುವಿನಲ್ಲಿ ಗೋವು, ಹಂದಿಯ ಕೊಬ್ಬು ಮಿಶ್ರಣ ಮಾಡಲಾಗಿದೆ, ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ.
ವಿವಾದ ಏನು? :
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗಿದ್ದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ಪತ್ತೆಯಾಗಿವೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ವಾರ ಹೇಳಿಕೆ ನೀಡಿದ ನಂತರ ವಿವಾದ ಉಂಟಾಗಿತ್ತು.
ಗುಜರಾತಿನ ಖಾಸಗಿ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿದ ನಾಯ್ಡು, ತುಪ್ಪದಲ್ಲಿ ಗೋಮಾಂಸ ಟ್ಯಾಲೋ, ಲಾರ್ಡ್ (ಹಂದಿಯ ಕೊಬ್ಬಿಗೆ ಸಂಬಂಧಿಸಿದ) ಮತ್ತು ಮೀನಿನ ಎಣ್ಣೆಯನ್ನು ಬೆರೆಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹಕ್ಕುಗಳನ್ನು ನಿರಾಕರಿಸಿದರು. ಅವರ ಆಡಳಿತದಲ್ಲಿ ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.