Tuesday, May 21, 2024
Homeಬೆಂಗಳೂರುವೈಟ್‌ಟಾಪಿಂಗ್‌ ರಸ್ತೆ ಅಗೆದು ಕೋಟ್ಯಂತರ ರೂ. ನಷ್ಟ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ವೈಟ್‌ಟಾಪಿಂಗ್‌ ರಸ್ತೆ ಅಗೆದು ಕೋಟ್ಯಂತರ ರೂ. ನಷ್ಟ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು,ಮೇ.16- ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಗಳನ್ನು ಮತ್ತು ನೂರಾರು ಕೋಟಿ ರೂಪಾಯಿಗಳನ್ನು ವೆಚ್ಛ ಮಾಡಿ ನಿರ್ಮಿಸಿರುವ ವೈಟ್‌ ಟಾಪಿಂಗ್‌ ರಸ್ತೆಗಳನ್ನು ಗೇಲ್‌ ಸಂಸ್ಥೆಯ ಗುತ್ತಿಗೆದಾರರು ಅಗೆದು ಹಾಕಿ ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಬೆಂಗಳೂರು ಮಹಾನಗರದಾದ್ಯಂತ ಕಳೆದ ಒಂದು ವರ್ಷದಿಂದೀಚೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಛ ಮಾಡಿ ಡಾಂಬರೀಕರಣ ಮಾಡಿರುವ ಹೊಸ ರಸ್ತೆಗಳನ್ನು ಮತ್ತು ಪ್ರತೀ ಕಿ. ಮೀ. ಒಂದಕ್ಕೆ ತಲಾ 15 ರಿಂದ 18 ಕೋಟಿ ರೂಪಾಯಿಗಳಷ್ಟು ವೆಚ್ಛದಲ್ಲಿ ನೂರಾರು ಕೋಟಿ ರೂಪಾಯಿಗಳ ವೆಚ್ಛದೊಂದಿಗೆ ಹೊಸದಾಗಿ ನಿರ್ಮಿಸಿರುವ ವೈಟ್‌ಟಾಪಿಂಗ್‌ ರಸ್ತೆಗಳನ್ನು ಗೇಲ್‌ ಸಂಸ್ಥೆಯ ಪೈಪ್‌ ಗಳನ್ನು ಅಳವಡಿಸಲು ಆ ಸಂಸ್ಥೆಯ ಗುತ್ತಿಗೆದಾರ ಜಯಚಂದ್ರ ಎಂಬುವವರು ಬೇಕಾಬಿಟ್ಟಿ ಅಗೆದು ಹಾಕಿ ಪಾಲಿಕೆಗೆ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತಿರುವ ವಿಷಯವನ್ನು ರಮೇಶ್‌ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಪದನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 17 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಛ ಮಾಡಿ ಕಳೆದ 08 ತಿಂಗಳಿಂದೀಚೆಗೆ ಡಾಂಬರೀಕರಣ ಮಾಡಲಾದ ಅತ್ತಿಮಬ್ಬೆ ರಸ್ತೆ, ಪುಟ್ಟಲಿಂಗಯ್ಯ ರಸ್ತೆ, ಬಿ. ವಿ. ಕಾರಂತ್‌ ರಸ್ತೆ ಮತ್ತು ಶಾಸ್ತ್ರೀನಗರದ 14ನೇ ಅಡ್ಡರಸ್ತೆ ಸೇರಿದಂತೆ ಬಹುತೇಕ ರಸ್ತೆಗಳನ್ನು ರಾತ್ರೋರಾತ್ರಿ ಗೇಲ್‌ ಸಂಸ್ಥೆಯ ಕೊಳವೆಗಳನ್ನು ಅಳವಡಿಸುವ ಗುತ್ತಿಗೆಯನ್ನು ತೆಗೆದುಕೊಂಡಿರುವ ಗುತ್ತಿಗೆದಾರರು ಸಂಪೂರ್ಣವಾಗಿ ಅಗೆದು ಹಾಕಿ, ಹತ್ತಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಪಾಲಿಕೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ಗೇಲ್‌, ಬಿಎಸ್‌‍ಎನ್‌ಎಲ್‌, ಜಲಮಂಡಳಿ ಹಾಗೂ ಓಎಫ್‌ಸಿ ಸಂಸ್ಥೆಗಳು ಸೇರಿದಂತೆ ಯಾವುದೇ ಸಂಸ್ಥೆಗಳ ರಸ್ತೆ ಅಗೆತಕ್ಕೆ ಅನುಮತಿ ಕೊಡುವ ಮುಂಚೆ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಿರುವ ರಸ್ತೆಗಳ ಅಗೆತಕ್ಕೆ ನೀಡಬಾರದು ಹಾಗೂ ಆರ್ಟಿರಿಯಲ್‌ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲಾದ ನಂತರದ 02 ವರ್ಷಗಳ ವರೆಗೆ ರಸ್ತೆಗಳ ಅಗೆತ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಸಹ ಪಾಲಿಕೆಯ ಅಧಿಕಾರಿಗಳು ಹಿಂದೆ ಮುಂದೆ ಆಲೋಚಿಸದೇ ರಸ್ತೆ ಅಗೆತಕ್ಕೆ ಅನುಮತಿ ನೀಡಿರುವುದು ಕಂಡುಬಂದಿದೆ.

ಪದನಾಭನಗರ ವಿಧಾನಸಭಾ ಕ್ಷೇತ್ರದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಮೋನೋಟೈಪ್‌ ವರೆಗಿನ 6.3 ಕಿ. ಮೀ. ಉದ್ದದ ಕೆ. ಆರ್‌ ರಸ್ತೆಯನ್ನು ಸುಮಾರು 96 ಕೋಟಿ ರೂಪಾಯಿಗಳಷ್ಟು ವೆಚ್ಛದಲ್ಲಿ ಹಾಗೂ ಕಷ್ಣರಾವ್‌ ಪಾರ್ಕ್‌ ಜಂಕ್ಷನ್‌ನಿಂದ ಸಾರಕ್ಕಿ ಜಂಕ್ಷನ್‌ ವರೆಗಿನ 7.5 ಕಿ. ಮೀ. ಉದ್ದದ ರಸ್ತೆಯನ್ನು ಸುಮಾರು 108 ಕೋಟಿ ರೂಪಾಯಿಗಳಷ್ಟು ವೆಚ್ಛದಲ್ಲಿ ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಇತ್ತೀಚೆಗಷ್ಟೇ ಪರಿವರ್ತಿಸಲಾಗಿರುತ್ತದೆ. ಈ ಎರಡು ರಸ್ತೆಗಳಲ್ಲಿಯೂ ಪಾಲಿಕೆಯ ಅಧಿಕಾರಿಗಳು ರಸ್ತೆ ಅಗೆತ ಅನುಮತಿಯನ್ನು ನೀಡಿರುವುದು ನಿಜಕ್ಕೂ ಕಾನೂನು ಬಾಹಿರ ಕಾರ್ಯವಾಗಿರುತ್ತದೆ.

ಈ ರಸ್ತೆಗಳ ಬದಲಾಗಿ ಪರ್ಯಾಯವಾಗಿ ಇರುವ ಆರ್‌. ವಿ. ರಸ್ತೆಯಲ್ಲಿ ರಸ್ತೆ ಅಗೆತಕ್ಕೆ ಈ ಸಂಸ್ಥೆಗಳಿಗೆ ಅನುಮತಿ ನೀಡಲು ಅವಕಾಶವಿದ್ದಾಗ್ಯೂ ಸಹ ಅದನ್ನು ಗಮನಿಸದೆ, ಈ ರಸ್ತೆಗಳ ಅಗೆತಕ್ಕೆ ಅನುಮತಿ ನೀಡುವ ಮೂಲಕ ಸುಮಾರು 200 ಕೋಟಿ ರೂಪಾಯಿಗಳಿಗೂ ಹೆಚ್ಚು ಆರ್ಥಿಕ ನಷ್ಟವನ್ನು ಪಾಲಿಕೆಗೆ ಉಂಟು ಮಾಡುವ ಕೆಲಸವನ್ನು ಪಾಲಿಕೆಯ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಅಧಿಕಾರಿಗಳು ಮಾಡಿರುತ್ತಾರೆ.

ಈ ರೀತಿ ಹೊಸದಾಗಿ ಡಾಂಬರೀಕರಣ ಮಾಡಲಾದ ರಸ್ತೆಗಳನ್ನು ಕಾನೂನು ಬಾಹಿರವಾಗಿ ತಮ ಸ್ವಾರ್ಥಕ್ಕಾಗಿ ಹಾಳುಗೆಡವಿ, ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ನಷ್ಟ ಉಂಟು ಮಾಡಿರುವ ಮಾಡಿರುವ ಗೇಲ್‌ ಸಂಸ್ಥೆಯ ಗುತ್ತಿಗೆದಾರ ಜಯಚಂದ್ರ ಸೇರಿದಂತೆ ಆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಹಾಗೂ ಹೊಸದಾಗಿ ಡಾಂಬರೀಕರಣ ಮಾಡಲಾದ ರಸ್ತೆಗಳ ಅಗೆತಕ್ಕೆ ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಮೇಶ್‌ ಅವರು ಬಿಬಿಎಂಪಿ ಅಡಳಿತಾಧಿಕಾರಿ ರಾಕೇಶ್‌ಸಿಂಗ್‌ ಹಾಗೂ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದಾರೆ.

RELATED ARTICLES

Latest News