ಬೆಂಗಳೂರು, ಆ.16- ದುಬೈನಲ್ಲಿ ಕುಳಿತು ಕೊಡಗಿನ ನಿವೃತ್ತ ಸಿವಿಲ್ ಎಂಜಿನಿಯರ್ ಒಬ್ಬರಿಗೆ ಕ್ರೈಮ್ ಬ್ಯೂರೋ ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ 2.21 ಕೋಟಿ ರೂ. ಲಪಟಾಯಿಸಿದ್ದ ಜಾಲವನ್ನು ಭೇದಿಸಿರುವ ಸಿಐಡಿ, ಸೈಬರ್ ಅಪರಾಧ ವಿಭಾಗದ ಪೊಲೀಸರು ಐವರನ್ನು ಬಂಧಿಸಿ 1.70 ಕೋಟಿ ನಗದು, 7700 ಅಮೆರಿಕನ್ ಡಾಲರ್ ಮತ್ತು ಈ ವಂಚನೆ ಹಣದಲ್ಲಿ ಖರೀದಿಸಿದ್ದ ಬೆಂಜ್ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಮಹಮದ್ ಶಬೀಬ್, ಮಹಮದ್ ಅಯಾನ್, ಅಹಸಾನ್ ಅನ್ಸಾರಿ, ಸಾಲಮನ್ ರಾಜ ಹಾಗೂ ದುಬೈನ ಯೂಸುಫ್ ಸೇಠ್ ಬಂಧಿತ ಆರೋಪಿಗಳು. ಕಳೆದ ಮೇ ತಿಂಗಳಲ್ಲಿ ಫೆಡೆಕ್ಸ್ ಎಂಬ ಕೊರಿಯರ್ ಕಂಪೆನಿಯಿಂದ ಮಾತನಾಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಕೊಡಗಿನ ಸಿವಿಲ್ ಎಂಜಿನಿಯರ್‌ಗೆ ವಾಟ್ಸಾಪ್ ಮೂಲಕ ಕರೆ ಮಾಡಿ ನಿಮಗೆ ಒಂದು ಪಾರ್ಸಲ್ ಬಂದಿದೆ. ಆ ಪಾರ್ಸಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವುದರಿಂದ ಸದರಿ ಪಾರ್ಸಲ್ ಸೀಜ್ ಆಗಿದೆ. ಈ ಬಗ್ಗೆ ನೀವು ಕ್ರೈಮ್ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಎಂದು ಹೇಳಿ ಕ್ರೈಮ್ ಪೊಲೀಸರಿಗೆ ವಾಟ್ಸಾಪ್ ಕರೆಯನ್ನು ಕನೆಕ್ಟ್ ಮಾಡಿದ್ದಾನೆ.
ಆಗ ಕ್ರೈಮ್ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವಂಚಕ ನಿಮ ಪಾರ್ಸಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ನಿಮನ್ನು ಬಂಧಿಸಬೇಕಾಗುತ್ತದೆ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿದ್ದಾನೆ.ಇದರಿಂದ ಬೆದರಿದ ಎಂಜಿನಿಯರ್ ತಮ ಬ್ಯಾಂಕ್ ಖಾತೆಯಿಂದ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ 2,21,40,000ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ಇಷ್ಟಕ್ಕೇ ಮುಗಿಯಿತು ಎಂದು ತಿಳಿದುಕೊಂಡಿದ್ದ ಅವರಿಗೆ ಮತ್ತೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವಂತೆ ವಂಚಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಸಂಶಯಗೊಂಡ ಎಂಜಿನಿಯರ್ ಫೆಡಕ್ಸ್ ಕಂಪೆನಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಕೊಡಗಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನನಗೆ ಫೆಡಕ್ಸ್ ಕಂಪೆನಿ ಹೆಸರಿನಲ್ಲಿ ಕರೆ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿರುವ ವಂಚಕರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ವಿವರಿಸಿದರು.ಪ್ರಕರಣದ ಮುಂದಿನ ತನಿಖೆ ಸಲುವಾಗಿ ಸಿಐಡಿ ಕಚೇರಿಯ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು.
ಈ ಪ್ರಕರಣದ ತನಿಖೆ ಕೈಗೊಂಡ ಸಿಐಡಿ, ಸೈಬರ್ ಕ್ರೈಮ್ ಪೊಲೀಸರು ವಂಚಕರ ಜಾಲವನ್ನು ಪತ್ತೆಹಚ್ಚಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು 26 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದ್ದು, ಆ ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಸೈಬರ್ ಕ್ರೈಮ್ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮುಖ್ಯ ತನಿಖಾಧಿಕಾರಿಯಾದ ಇನ್ಸ್ ಪೆಕ್ಟರ್ ಬಿ.ಸಿ.ಯೋಗೇಶ್‌ಕುಮಾರ್ ನೇತೃತ್ವದ ತಂಡ ಈ ವಂಚಕರನ್ನು ಬಂಧಿಸಿ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.