Saturday, July 27, 2024
Homeರಾಜ್ಯಗ್ಯಾರಂಟಿಗಳನ್ನು ನಿಲ್ಲಿಸುವ ಶಾಸಕರು-ಸಚಿವರ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ

ಗ್ಯಾರಂಟಿಗಳನ್ನು ನಿಲ್ಲಿಸುವ ಶಾಸಕರು-ಸಚಿವರ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ

ಬೆಂಗಳೂರು, ಜೂ.10- ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್‌‍ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿರುವುದು ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣವನ್ನು ನೋಡಿದರೂ ಸಾಕು. ಈಚೆಗೆ ಬಂದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ.

ಈ ಲೋಕಸಭೆಯಲ್ಲಿ ನಮ್ಮ ಕಾಂಗ್ರೆಸ್‌‍ ಪಕ್ಷವು ಮತಗಳಿಕೆಯಲ್ಲಿ ಶೇಕಡಾ 14ರಷ್ಟು ಹೆಚ್ಚಳ ಕಂಡಿದೆ. ಅಂದರೆ, 2019ರಲ್ಲಿ ಶೇಕಡಾ 31.5ರಷ್ಟಿದ್ದ ಮತ ಪ್ರಮಾಣವು ಈ ಬಾರಿ 45.5ಕ್ಕೆ ಏರಿಕೆಯಾಗಿದೆ. ಅದೇ ಶೇಕಡಾ 51.5ರಷ್ಟಿದ್ದ ಬಿಜೆಪಿ ಮತ ಗಳಿಕೆಯು ಈ ಬಾರಿ ಶೇಕಡಾ 46ಕ್ಕೆ ಕುಸಿತ ಕಂಡಿದೆ. ಇದು ಕಾಂಗ್ರೆಸ್‌‍ ಬಗ್ಗೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌‍ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪ್ರತಿ ಮನೆಮನೆಗೆ ಗ್ಯಾರಂಟಿ ಕಾರ್ಡ್‌ ಗಳನ್ನು ಹಂಚಿ ಆಶ್ವಾಸನೆ ನೀಡಿತ್ತು. ಇದರ ಬಗ್ಗೆ ಐತಿಹಾಸಿಕ ಪ್ರಣಾಳಿಕೆಯನ್ನು ತಯಾರಿಸಿ ಅದನ್ನು ಜನರ ಮುಂದಿಟ್ಟು ವಾಗ್ದನ ಮಾಡಿತ್ತು. ಆ ವಾಗ್ದಾನದ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಕಾಂಗ್ರೆಸ್‌‍ ಪಕ್ಷಕ್ಕೆ ಮತನೀಡಿ 136 ಸ್ಥಾನಗಳಲ್ಲಿ ಅಭೂತಪೂರ್ವ ಜಯಕ್ಕೆ ಕಾರಣಿ ಭೂತರಾದರು.

ಸರ್ಕಾರ ರಚನೆಯಾದ 9 ತಿಂಗಳಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ರಾಜ್ಯವನ್ನು ಮಾದರಿಯನ್ನಾಗಿ ತೆಗೆದುಕೊಂಡು ಎಐಸಿಸಿ ಕೂಡ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರಿಂದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರದಿಂದ ನೀಡುವ ಎರಡು ಸಾವಿರ ರೂ. ಉಳಿಸಿಕೊಂಡು ಬಂಗಾರ ಖರೀದಿ ಮಾಡಿದ ಮಹಿಳೆಯರಿದ್ದಾರೆ. ಫ್ರಿಜ್‌ ಖರೀದಿಸಿದವರಿದ್ದಾರೆ. ಸ್ಮಾರ್ಟ್‌ ಫೋನ್‌ಗಳನ್ನು ಖರೀದಿ ಮಾಡಿದವರಿದ್ದಾರೆ. ಈ ಹಣ ಮಕ್ಕಳ ಶಿಕ್ಷಣಕ್ಕೆ, ಹಿರಿಯರ ಔಷಧಕ್ಕೆ ಸಹ ನೆರವಾಗುತ್ತಿದೆ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ.

ನಮ್ಮ ಸರ್ಕಾರವನ್ನು ಹರಸಿದ್ದಾರೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಯೋಜನೆಗಳು ಜನರ ಜೀವನಮಟ್ಟ ಸುಧಾರಣೆಗೆ ಕಾರಣವಾಗಿವೆ ಎಂದು ಹೇಳಿದರು.ಅವುಗಳ ಬಗ್ಗೆ ಹಗುರವಾಗಿ ಮಾತನಾಡುವುದು ಮತ್ತು ಟೀಕಿಸುವುದಕ್ಕೆ ಕಡಿವಾಣ ಹಾಕುವಂತೆ ದಿನೇಶ್‌ ಗೂಳಿಗೌಡ ಒತ್ತಾಯಿಸಿದ್ದಾರೆ.

RELATED ARTICLES

Latest News