Friday, October 25, 2024
Homeಬೆಂಗಳೂರು9 ಜೀವಗಳು ಬಲಿಯಾದ ಬಳಿಕ ಎಚ್ಚೆತ್ತ ಬಿಬಿಎಂಪಿಯಿಂದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ

9 ಜೀವಗಳು ಬಲಿಯಾದ ಬಳಿಕ ಎಚ್ಚೆತ್ತ ಬಿಬಿಎಂಪಿಯಿಂದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ

BBMP scampers to save face after Babusapalya building collapse tragedy exposes illegal buildings menace in Bengaluru

ಬೆಂಗಳೂರು,ಅ.25- ಬಾಬುಸಾಬ್ ಪಾಳ್ಯ ಕಟ್ಟಡ ದುರಂತ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿರುವ ಹಲವಾರು ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಮಹಾಲಕ್ಷೀಪುರ ವಿಧಾನಸಭಾ ಕ್ಷೇತ್ರದ ಕಮಲಾನಗರ ಮಾರ್ಕೆಟ್ ಸಮೀಪದ ಶಿಥೀಲ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಮಲಾನಗರ 3ನೇ ಮುಖ್ಯರಸ್ತೆಯ ಬಳಿ ದ್ವಿತೀಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 290 ಚದುರಡಿ ಪ್ರದೇಶದಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಮನೆಯನ್ನು ಇಂದು ತೆರವುಗೊಳಿಸಲಾಗುತ್ತಿದೆ.

ಕಟ್ಟಡದ ತಳಭಾಗದಲ್ಲಿ ದ್ವಿತೀಯ ನೀರು ಗಾಲುವೆಯ ಮೂಲಕ ಬರುವ ನೀರು ಮನೆಯ ತಳಪಾಯಕ್ಕೆ ಹೋಗಿರುವ ಕಾರಣ, ತಳಪಾಯದ ನೀರಿನ ಸಂಪ್ ಹಾಗೂ ಗೋಡೆ ಕುಸಿದಿದ್ದ ಹಿನ್ನೆಲೆಯಲ್ಲಿ ವಲಯ ಆಯುಕ್ತರಾದ ಅರ್ಚನಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕಟ್ಟಡ ತೆರವುಗೊಳಿಸಲು ಸೂಚನೆ ನೀಡಿದ್ದರು.

ಹೀಗಾಗಿ ಬಿಬಿಎಂಪಿ ಮಾಜಿ ಸದಸ್ಯ ಶಿವರಾಜ್ ನೇತೃತ್ವದಲ್ಲಿ ಇಂದು ಮುಂಜಾನೆ ಸಿಬ್ಬಂದಿಗಳು ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.ಈ ಕಟ್ಟಡದಲ್ಲಿ 5 ಮನೆಗಳಿದ್ದು, ಎಲ್ಲಾ ಮನೆಗಳನ್ನು ಬಾಡಿಗೆಗೆ ನೀಡಲಾಗಿರುತ್ತದೆ. ತಳಪಾಯದ ಗೋಡೆ ಕುಸಿದಿರುವ ಪರಿಣಾಮ ಮನೆಗಳಲ್ಲಿದ್ದ ಎಲ್ಲಾ ಕುಟುಂಬಸ್ತರನ್ನು ಸ್ಥಳಾಂತರಿಸಲಾಗಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಾಗ್ರಿಗಳನ್ನು ಹೊರ ತೆಗೆಯಲಾಗಿದೆ. 5 ಕುಟುಂಬಗಳ ಪೈಕಿ, 3 ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದು, 1 ಕುಟುಂಬ ಅಂಬೇಡ್ಕರ್ ಭವನ, ಇನ್ನೊಂದು ಕುಟುಂಬಕ್ಕೆ ಸಮೀಪದ ದೇವಸ್ಥಾನದಲ್ಲಿ ಆಶ್ರಯ ನೀಡಲಾಗಿದೆ.ಸುರಕ್ಷತೆಯ ದೃಷ್ಟಿಯಿಂದ ಎದುರು ಮನೆಯವರನ್ನು ಕೂಡಾ ಖಾಲಿ ಮಾಡಿಸಲಾಗಿದೆ.

ಹೊರಮಾವಿನಲ್ಲೂ ಕಟ್ಟಡ ತೆರವು:
ಮಹದೇವಪುರದ ಹೊರಮಾವಿನ ನಂಜಪ್ಪ ಗಾರ್ಡ್ನ್ನಲ್ಲಿ ಪುಟ್ಟಪ್ಪ ಎಂಬುವವರು 250 ಚದುರಡಿ ನಿವೇಶನದಲ್ಲಿ ನಿರ್ಮಿಸಿರುವ ಆರಂತಸ್ತಿನ ಕಟ್ಟಡ ತೆರವು ಮಾಡಲು ತೀರ್ಮಾನಿಸಲಾಗಿದೆ.ನಿರಂತರ ಮಳೆಯಿಂದಾಗಿ ಕಟ್ಟಡ ವಾಲಿದ ರೀತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಟ್ಟಡ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ.

ಕಟ್ಟಡ ತೆರವು ಮಾಡುವಂತೆ ಬಿಬಿಎಂಪಿ ನೀಡಿದ ನೋಟೀಸ್ಗೆ ಮಾಲೀಕ ಕೂಡ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ತೆರವು ಮಾಡದಿದ್ದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬಿಬಿಎಂಪಿ ಅಧಿಕಾರಿಗಳೂ ಎಚ್ಚರಿಸಿದ ಹಿನ್ನೆಲೆಯಲ್ಲಿ ಪುಟ್ಟಪ್ಪ ಎಂಟು ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದಾರೆ.

ಸದ್ಯ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗದಂತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೇ ರೀತಿ ನಗರದಲ್ಲಿರುವ ಇನ್ನಿತರ ಹಲವಾರು ಶಿಥಿಲ ಕಟ್ಟಡಗಳನ್ನು ಪತ್ತೆ ಹಚ್ಚಿ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಬುಸಾಬ್ ಪಾಳ್ಯದ ಕಟ್ಟಡದ ಸ್ಯಾಂಪಲ್ ಪಡೆದ ಪೊಲೀಸರು:
ಇಲ್ಲಿನ ಆರಂತಸ್ತಿನ ಕಟ್ಟಡ ಕುಸಿದು 9 ಮಂದಿ ಕಾರ್ಮಿಕರು ಬಲಿಯಾಗಲು ಕಾರಣವಾದ ಕಟ್ಟಡ ಕಟ್ಟಲು ಬಳಸಲಾಗಿದ್ದ ವಸ್ತುಗಳನ್ನು ಸಂಗ್ರಹಿಸಿ ನೈಜತೆ ಪರೀಕ್ಷೆಗಾಗಿ ಲ್ಯಾಬ್ಗೆ ರವಾನೆ ಮಾಡಲಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಪಿಲ್ಲರ್ ವಾಲಿ ಕಟ್ಟಡ ಕುಸಿದುಬಿದ್ದಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಿಸಲು ಬಳಸಲಾದ ವಸ್ತುಗಳ ಕ್ವಾಲಿಟಿ ಚೆಕ್ ಮಾಡಿಸಲು ತೀರ್ಮಾನಿಸಲಾಗಿದೆ.

ಕಟ್ಟಡ ನಿರ್ಮಿಸಲು ಬಳಸಲಾದ ಸಿಮೆಂಟ್, ಮರಳು, ಹಾಲೋಬ್ಲಾಕ್, ಕಂಬಿ, ಬಿಲ್ಡಿಂಗ್ ಕಟ್ಟುತ್ತಿದ್ದ ಸ್ಥಳದಲ್ಲಿನ ಮಣ್ಣು, ಬಿಲ್ಡಿಂಗ್ ಬಳಿಯ ವೇಸ್ಟೇಜ್ ವಸ್ತುಗಳು ಸೇರಿದಂತೆ ಸುಮಾರು 6 ಸ್ಯಾಂಪಲ್ಗಳನ್ನು ಸಂಗ್ರಹಿಸಿ ಲ್ಯಾಬ್ಗೆ ರವಾನೆ ಮಾಡಲಾಗಿದೆ.ಕಟ್ಟಡ ನಿರ್ಮಿಸಲು ಬಳಸಲಾದ ವಸ್ತುಗಳ ನೈಜತೆ ವರದಿ ಬಂದ ನಂತರ ಮೆಟಿರಿಯಲ್ ಸರಬರಾಜು ಮಾಡಿದ ವ್ಯಕ್ತಿಗಳಿಗೂ ಪೊಲೀಸರು ನೋಟೀಸ್ ನೀಡುವ ಸಾಧ್ಯತೆಗಳಿವೆ.

RELATED ARTICLES

Latest News