Thursday, December 12, 2024
Homeರಾಜಕೀಯ | Politicsಉಪಸಮರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಇಬ್ಬರು ಮಾಜಿ ಸಿಎಂಗಳ ಪುತ್ರರು

ಉಪಸಮರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಇಬ್ಬರು ಮಾಜಿ ಸಿಎಂಗಳ ಪುತ್ರರು

The sons of two former CM's who contesting in Elections

ಬೆಂಗಳೂರು,ಅ.25- ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರ ರಂಗೇರಿದ್ದು, ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳು ರಾಜಕೀಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.ಶಿಗ್ಗಾಂವಿ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮಾಯಿ ಪುತ್ರ ಭರತ್‌ ಬೊಮಾಯಿ, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೂ ಸಂಡೂರು ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಈಗ ಸಂಸದರಾಗಿ ಆಯ್ಕೆಯಾದ ಇ.ತುಕಾರಾಮ್‌ ಪತ್ನಿ ಅನ್ನಪೂರ್ಣ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ರಾಜಕಾರಣ ಪ್ರವೇಶ ರಾಜ್ಯದಲ್ಲಿ ಹೊಸದೇನಲ್ಲ. ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರಿಂದ ಹಿಡಿದು ಬಿ.ಎಸ್‌‍.ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ ಕುಟುಂಬದ ಕುಡಿಗಳು ರಾಜಕೀಯ ರಂಗಪ್ರವೇಶ ಮಾಡಿ ಸೋಲು – ಗೆಲುವು ಕಂಡಿದ್ದಾರೆ.

ಇದೀಗ ಉಪಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮಾಯಿ ಪುತ್ರ ಭರತ್‌ ಬೊಮಾಯಿ ಅವರು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ಮೂರನೇ ತಲೆಮಾರು:
ಹೆಚ್‌.ಡಿ.ದೇವೇಗೌಡ, ಎಸ್‌‍.ಆರ್‌.ಬೊಮಾಯಿ ಸಹ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ಶಾಸಕ, ಸಂಸದರಾದರೂ ಮುಖ್ಯಮಂತ್ರಿ ಆಗುವ ಯೋಗ ಲಭಿಸಿದ್ದು ಹೆಚ್‌. ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮಾಯಿ ಅವರಿಗೆ ಮಾತ್ರ. ಇದೀಗ ಮೂರನೇ ತಲೆಮಾರಿನ ನಿಖಿಲ್‌ ಕುಮಾರಸ್ವಾಮಿ ಹಾಗೂ ಭರತ್‌ ಬೊಮಾಯಿ ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮೂರನೇ ಬಾರಿಗೆ ಸ್ಪರ್ಧೆ:
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಮೂಲಕ ನಿಖಿಲ್‌ ಕುಮಾರಸ್ವಾಮಿ ಮೂರನೇ ಬಾರಿಗೆ ಸ್ಪರ್ಧೆಗಿಳಿದ್ದಾರೆ. 2019 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಆಗ ಜೆಡಿಎಸ್‌‍ ಹಾಗೂ ಕಾಂಗ್ರೆಸ್‌‍ ಮೈತ್ರಿ ಮಾಡಿಕೊಂಡಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಮೂರನೇ ಬಾರಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್‌ ಜಯಭೇರಿ ಬಾರಿಸುತ್ತಾರಾ ಕಾದುನೋಡಬೇಕು.

ಮೊದಲ ಬಾರಿಗೆ ಅಖಾಡಕ್ಕೆ:
ಶಿಗ್ಗಾಂವಿಯಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದಿರುವ ಬಸವರಾಜ ಬೊಮಾಯಿ ಅವರಿಗೆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯವಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ.

ಮೊದಲ ಬಾರಿಗೆ ಭರತ್‌ ಬೊಮಾಯಿ ಸ್ಪರ್ಧಿಸುತ್ತಿದ್ದರೂ, 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಕ್ಷೇತ್ರದ ಪರಿಚಯ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಂದೆಯ ರಾಜಕೀಯ ಪಟ್ಟು ಮತ್ತು ತಂತ್ರಗಾರಿಕೆಯನ್ನು ಹತ್ತಿರದಿಂದ ನೋಡಿದ್ದು, ಅದು ಸಹ ಈ ಚುನಾವಣೆಯಲ್ಲಿ ಸಹಕಾರಿಯಾಗಲಿದೆ. ಹಾಗಾಗಿ, ರಾಜಕೀಯಕ್ಕೆ ಇಳಿಯಲು ಭರತ್‌ ನಿರ್ಧಾರ ಮಾಡಿದರೆಂದು ವಿಶ್ಲೇಷಿಸಲಾಗುತ್ತಿದೆ.

ಸಂಡೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಇ.ತುಕಾರಾಮ್‌ ಅವರು ಹೈಕಮಾಂಡ್‌ ಸೂಚನೆ ಮೇರೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಸ್ಪರ್ಧಿ ಬಿ. ಶ್ರೀರಾಮುಲು ಪರಾಭವಗೊಂಡಿದ್ದರು. ತುಕಾರಾಮ್‌ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಸಂಡೂರು ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿದ್ದ ತುಕಾರಾಮ್‌ ಅವರು ಕ್ಷೇತ್ರದಲ್ಲಿ ಬಿಗಿ ಹಿಡಿತವಿದೆ. ಸಂಡೂರು ಎಸ್‌‍ಟಿ ವರ್ಗದ ವಿಧಾನಸಭಾ ಕ್ಷೇತ್ರವಾಗಿದ್ದು, ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಇದಾಗಿದೆ. ಒಟ್ಟಾರೆ, ರಾಜಕಾರಣಿಗಳ ಕುಟುಂಬದ ಸದಸ್ಯರು ಈ ಉಪಚುನಾವಣೆಯಲ್ಲಿ ಗೆದ್ದು ಬೀಗುವರೇ ಎಂಬುದು ಚುನಾವಣಾ ಫಲಿತಾಂಶದವರೆಗೂ ಕಾಯಬೇಕು.

RELATED ARTICLES

Latest News