Friday, September 20, 2024
Homeರಾಜಕೀಯ | Politicsನಾಯಕರ ಒಡ್ಡೊಲಗದ ನಡುವೆ ಅನಾಥರಾದ ಕಾಂಗ್ರೆಸ್‌‍ ಕಾರ್ಯಕರ್ತರು

ನಾಯಕರ ಒಡ್ಡೊಲಗದ ನಡುವೆ ಅನಾಥರಾದ ಕಾಂಗ್ರೆಸ್‌‍ ಕಾರ್ಯಕರ್ತರು

ಬೆಂಗಳೂರು, ಆ.13– ಕಾಂಗ್ರೆಸಿನ ಪ್ರಭಾವಿ ನಾಯಕರ ಅಬ್ಬರ, ಆರ್ಭಟ ಹಾಗೂ ರಾಜಕೀಯ ಸಮರಗಳ ನಡುವೆ ಕಾರ್ಯಕರ್ತರು ಅತಂತ್ರವಾಗಿದ್ದು, ಅವ ಅಧಿಕಾರದ ಅಭಿಲಾಷೆ ಮರಿಚಿಕೆಯಾಗಿಯೇ ಉಳಿದಿದೆ.ರಾಜ್ಯದ ನಿಗಮ-ಮಂಡಳಿಗಳಿಗೆ ಮೊದಲ ಹಂತದಲ್ಲಿ ಅಧ್ಯಕ್ಷರನ್ನು ನೇಮಿಸಲಾಗಿದೆ. ನಂತರದ ಹಂತದಲ್ಲಿ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಿಸಬೇಕಿತ್ತು. ಅದಕ್ಕಾಗಿ ರಚಿಸಲಾಗಿದ್ದ ಪರಮೇಶ್ವರ್‌ ನೇತೃತ್ವದ ಸಮಿತಿ ಅವಧಿ ಮುಗಿದಿದ್ದರೂ ಕೂಡ ವರದಿ ನೀಡದೆ, ಮತ್ತೆ ಒಂದು ತಿಂಗಳು ಕಾಲಾವಕಾಶ ಕೇಳಿರುವುದು ಕಾರ್ಯಕರ್ತರಲ್ಲಿ ಭಾರಿ ನಿರಾಶೆಯುಂಟು ಮಾಡಿದೆ.

ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರೇ ಪಕ್ಷದ ಆಸ್ತಿ, ಜೀವಾಳ ಎಂದೆಲ್ಲ ಪುಂಗಿ ಊದುವ ಪ್ರಭಾವಿ ನಾಯಕರು ಅಧಿಕಾರ ಸಿಗುತ್ತಿದ್ದಂತೆ ನಾವು ಮತ್ತು ನಮ್ಮ ಹಿಂಬಾಲಕು ಎಂಬ ಸ್ವಾರ್ಥಕ್ಕೆ ಸೀಮಿತಗೊಳ್ಳುವುದು ಪದೇ ಪದೇ ಸಾಬೀತುಕೊಳ್ಳುತ್ತಿದೆ. ಈ ಹಿಂದೆ ಕಾಂಗ್ರೆಸ್‌‍ ಕಾರ್ಯಕರ್ತರನ್ನು ಕಡೆಗಣಿಸಿದಾಗಲೆಲ್ಲಾ ಮೂಲೆಗುಂಪಾಗಿ ಹೋಗಿದೆ. ಪಕ್ಷ ಕುಸಿದಾಗ ಮುಂಚೂಣಿ ನಾಯಕರು ಮತ್ತೆ ಕಾರ್ಯಕರ್ತರ ಸಾಮರ್ಥ್ಯವನ್ನು ಜಪ ಮಾಡುತ್ತಾ ಉರಿದುಂಬಿಸಲು ಆರಂಭಿಸುತ್ತಾರೆ. ಮತ್ತೆ ನಾಯಕರ ಮಾತಗಳನ್ನು ನಂಬುವ ಕಹಿ ಮರೆತು ಹಗಲು ರಾತ್ರಿ ಶ್ರಮವರಿಯದೆ ದುಡಿಯುತ್ತಾರೆ.

ರಾಜಕೀಯ ಎದುರಾಳಿಗಳೊಂದಿಗೆ ಬಡಿದಾಡಿಕೊಂಡು, ಪ್ರಕರಣ ದಾಖಲಿಸಿಕೊಂಡು ಹೋರಾಟ ಮಾಡಿ ಜನರ ಮನವೋಲಿಸಿ ಮತ ಹಾಕಿಸಿ, ಹೆಚ್ಚು ಶಾಸಕರನ್ನು ಗೆಲ್ಲಿಸುವ ಮೂಲಕ ಸರ್ಕಾರ ರಚನೆಗೆ ಕಾರಣರಾಗುತ್ತಾರೆ. ಅಧಿಕಾರ ಕೈಗೆ ಸಿಗುತ್ತಿದ್ದಂತೆ ಪಕ್ಷದ ಮುಂಚೂಣಿ ನಾಯಕರು ಕಾರ್ಯಕರ್ತರನ್ನು ಮತ್ತೆ ಮರೆತು ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತು, ನಾನೇ ಪ್ರಭಾವಿ ನಾಯಕ, ನಾನು ಇಲ್ಲದೆ ಇದ್ದರೆ ಕಾಂಗ್ರೆಸ್‌‍ ಪಕ್ಷವೇ ಇರುವುದಿಲ್ಲ ಎಂಬ ದಾಟಿಯಲ್ಲಿ ನಡೆದುಕೊಳ್ಳಲು ಆರಂಭಿಸುತ್ತಾರೆ.

ಕಾರ್ಯಕರ್ತರ ಶ್ರಮ, ಬದ್ಧತೆ ಮತ್ತು ಅರ್ಪಣಾ ಮನೋಭಾವ ನಗಣ್ಯವಾಗುತ್ತದೆ. ಶಾಸಕರಾದವರು ಸಚಿವರಾಗಲು, ಸಚಿವರಾದವರು ಉಪಮುಖ್ಯಮಂತ್ರಿಗಳಾಗಲು, ಉಪಮುಖ್ಯಮಂತ್ರಿಗಳಾದವರು ಮುಖ್ಯಮಂತ್ರಿಗಳಾಗಲು ಲಾಬಿಗಳು ಶುರುವಾಗುತ್ತವೆ. ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಕಾರ್ಯಕರ್ತರು ಸಂಪೂರ್ಣ ಮೂಲೆಗುಂಪಾಗುತ್ತಾರೆ.

ಸರ್ಕಾರ ರಚನೆ ಆದರೆ ಬದುಕು ಹಸನಾಗುತ್ತದೆ, ಆಡಳಿತದಲ್ಲಿ ನಾವು ಪಾಲುದಾರರಾಗುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾರ್ಯಕರ್ತರಿಗೆ ಎಂದಿನಂತೆ ಭ್ರಮ ನಿರಸ ಕಟ್ಟಿಟ್ಟ ಬುತ್ತಿಯಾಗುತ್ತದೆ. ನಾಯಕರು ಎಂದಿನಂತೆ ತಾವೇ ಮೊದಲು, ತಮಿಂದಲೇ ಪಕ್ಷ, ಎಲ್ಲಾ ಪ್ರಾತಿನಿಧ್ಯಗಳು ತಮಗೆ ಸಿಗಬೇಕು ಎಂಬ ದೋರಣೆಯಲ್ಲಿ ವರ್ತಿಸುತ್ತಾರೆ.

2013 ರಿಂದ 2018ರ ನಡುವಿನ ಕಾಂಗ್ರೆಸ್‌‍ ಆಡಳಿತ ಅವಧಿಯಲ್ಲಿ ಎರಡುವರೆ ವರ್ಷಗಳ ಕಾಲ ನಿಗಮ ಮಂಡಳಿಗಳಿಗೆ ನೇಮಕಾತಿಯೇ ನಡೆದಿರಲಿಲ್ಲ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ ಕಾಲದಲ್ಲೂ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಲಾಗಿದೆ.

ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬ ಕಾರಣಕ್ಕೆ ಶಾಸಕರಿಗೆ ಮಾತ್ರ ಆದ್ಯತೆಗಳು ದೊರೆಯುತ್ತಿವೆ. ಶಾಸಕರನ್ನು ನಿಗಮ-ಮಂಡಳಿಗಳಿಗೆ ನೇಮಿಸುವ ಮೂಲಕ, ಕಾರ್ಯಕರ್ತರನ್ನು ಅಧಿಕಾರದಿಂದ ವಂಚಿಸಲಾಗಿದೆ. ಜೊತೆಗೆ ಪ್ರಭಾವಿ ನಾಯಕರುಗಳ ಹಿಂಬಾಲಕರು ಹಾಗೂ ಆಪ್ತರಿಗೆ ಸಾಂವಿಧಾನಿಕವಲ್ಲದ ಹಾಗೂ ನಿಯಮಗಳನ್ನು ಮೀರಿ ಹುದ್ದೆಗಳನ್ನು ಸೃಷ್ಟಿಸಿ, ಅಧಿಕಾರ ನೀಡಲಾಗಿದೆ.

ಶಾಸಕರಿಗೆ ಶೇ.60ರಷ್ಟು ಹಾಗೂ ಕಾರ್ಯಕರ್ತರಿಗೆ ಶೇ.40ರಷ್ಟು ಅನುಪಾತದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯಾಯಿತು. ಈ ಹಂತದಲ್ಲಿ ಪ್ರಭಾವಿಗಳು ಮಾತ್ರ ಅವಕಾಶ ಪಡೆದುಕೊಂಡರು. ಕೆಪಿಸಿಸಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನಿಗಮ ಮಂಡಳಿಯ ನೇಮಕಾತಿ ವೇಳೆ, ತಮ ಅಭಿಪ್ರಾಯ ಸಂಗ್ರಹಿಸಿಲ್ಲ ಎಂಬ ಆಕ್ಷೇಪವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಈ ಕಾರಣಕ್ಕೆ ನಿಗಮ-ಮಂಡಳಿಯ ಸದಸ್ಯರು ಹಾಗೂ ನಿರ್ದೇಶಕರು ಆಯ್ಕೆ ಪ್ರಕ್ರಿಯೆಗೆ ಪಟ್ಟಿ ನೀಡುವಂತೆ ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ ಜುಲೈ 31ರ ಒಳಗೆ ವರದಿ ನೀಡಬೇಕಿತ್ತು. ಅವಧಿ ಮುಗಿದು 15 ದಿನ ಕಳೆದರೂ ಈವರೆಗೂ ವರದಿ ಸಲ್ಲಿಸಿಲ್ಲ. ಈ ನಡುವೆ ಜೆಡಿಎಸ್‌‍-ಬಿಜೆಪಿ ಪಾದಯಾತ್ರೆಗಳು, ಕಾಂಗ್ರೆಸ್ಸಿನ ಜನಾಂಗೋಲನಗಳ ಅಬ್ಬರವೇ ಜೋರಾಗಿತ್ತು. ಕಾರ್ಯಕರ್ತರ ನೇಮಕಾತಿಯ ವಿಚಾರಗಳು ಮೂಲಗುಂಪಾಗಿ ಹೋಗಿವೆ.

ಮೂಲಗಳ ಪ್ರಕಾರ ಪರಮೇಶ್ವರ ನೇತೃತ್ವದ ಸಮಿತಿ ಆಗಸ್ಟ್ 31ರವರೆಗೂ ಕಾಲಾವಕಾಶ ಕೇಳಿದೆ ಎಂದು ಹೇಳಲಾಗಿದೆ. ಜಿಲ್ಲಾ ಸಚಿವರು ಸ್ಥಳೀಯ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಗಳ ಘಟಕಗಳಿಂದ ವರದಿ ರವಾನಿಸಲಾಗಿದೆ. ಕೆಲವು ಜಿಲ್ಲೆಗಳ ವರದಿಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲವನ್ನು ಕ್ರೂಢೀಕರಿಸಿದ ಬಳಿಕ ಅಂತಿಮ ವರದಿ ನೀಡುವುದಾಗಿ ಪರಮೇಶ್ವರ್‌ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದಲ್ಲ ಒಂದು ನೆಪ ಒಡ್ಡಿ ಕಾರ್ಯಕರ್ತರನ್ನು ಅಧಿಕಾರದಿಂದ ದೂರ ಇಡುವ ಪ್ರಕ್ರಿಯೆ ಸದಾ ಕಾಲ ನಡೆಯುತ್ತಲೇ ಇದೆ. ಪ್ರಭಾವಿಗಳಾಗಿದ್ದರೆ ಮುಂಚೂಣಿ ನಾಯಕರ ಹಿಂಬಾಲಕರಾಗಿದ್ದರೆ ಮಾತ್ರ ಯಾವುದೂ ಒಂದು ರೂಪದಲ್ಲಿ ಅಧಿಕಾರ ಗಿಟ್ಟಿಸಲು ಸಾಧ್ಯವಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪದೇ ಪದೇ ತಮ ಭಾಷಣದಲ್ಲಿ ಯಾರು ದೊಡ್ಡ ನಾಯಕರಾಗಿದ್ದರು ತಮ ಬೂತ್‌ಗಳಲ್ಲಿ ಕಾಂಗ್ರೆಸ್‌‍ ಗೆ ಲೀಡ್‌ ಕೊಡಿಸದಿದ್ದರೆ ಅಂಥವರನ್ನು ಯಾವುದೇ ಅವಕಾಶಗಳಿಗೆ ಪರಿಗಣಿಸುವುದಿಲ್ಲ ಎಂದು ಹೇಳುತ್ತಿರುತ್ತಾದೆ. ಆದರೆ ಇತ್ತೀಚಿಗೆ ನಡೆದಿರುವ ಕೆಲವು ನೇಮಕಾತಿಗಳಲ್ಲಿ ಬೂತ್‌ ಮಟ್ಟದಲ್ಲಿರಲಿ ತಮ ಮನೆಯ ಸುತ್ತಮುತ್ತಲಿನ ಜನರಿಗೆ ಪರಿಚಯ ಇಲ್ಲದಂತಹ ನಾಯಕರಿಗೂ ಪ್ರಭಾವಿಗಳ ಹಿಂಬಾಲಕರು ಎಂಬ ಕಾರಣಕ್ಕಾಗಿ ಮಣೆ ಹಾಕಲಾಗಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ಬೆವರಿಳಿಸಿದ ಕಾರ್ಯಕರ್ತರು ಮಾತ್ರ ಈಗಲೂ ಅನಾಥ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಚುನಾವಣೆ ಎದುರಾಗುವವರೆಗೂ ಎದುರಾಗುವವರೆಗೂ ಮುಂಚೂಣಿ ನಾಯಕರುಗಳಿಗೆ ಕಾರ್ಯಕರ್ತರು ಪಕ್ಷದ ಆಸ್ತಿ ಎಂಬುದು ನೆನಪಾಗುವುದಿಲ್ಲ.

RELATED ARTICLES

Latest News