ಬೆಂಗಳೂರು,ಆ.11- ಮಕ್ಕಳಿಗೆ ಇನ್ನು ಮುಂದೆ ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುವ ಸಂಬಂಧ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದು ತೀರ್ಮಾನ ಮಾಡಲಾಗುತ್ತದೆ ಎಂದು ಶಾಲಾ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬಿಜೆಪಿ ಸದಸ್ಯ ರವಿಕುಮಾರ್ ಅವರು, ಬಾಳೆಹಣ್ಣು ಮತ್ತು ಮೊಟ್ಟೆ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವಾರದಲ್ಲಿ ಮೂರು ದಿನ ಮೊಟ್ಟೆ, ಮೂರು ದಿನ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಇದಕ್ಕಾಗಿ ಅನುದಾನವನ್ನು ನೀಡುತ್ತಿದೆ. ಎಲ್ಲಾ ಭಾಗಗಳಲ್ಲಿ ಮೊಟ್ಟೆ, ಬಾಳೆಹಣ್ಣು ಹಾಗೂ ಕೆಲವು ಭಾಗಗಳಲ್ಲಿ ಮಾತ್ರ ಹೆಚ್ಚು ದಿನ ಮೊಟ್ಟೆಯನ್ನು ಕೊಡಲಾಗುತ್ತದೆ. ಆದರೆ ಕೆಲವು ಕಡೆ ಇದು ತಾರತಮ್ಯ ನೀತಿಯಿಂದ ಕೂಡಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಕಡೆ ಆಕ್ಷೇಪ ಕೇಳಿಬಂದಿವೆ. ಕೆಲವು ಕಡೆ ಪೋಷಕರು ನಮ ಮಕ್ಕಳು ಮೊಟ್ಟೆ ತಿನ್ನುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಶಾಲಾ ಪ್ರವೇಶವಾದ ತಕ್ಷಣವೇ ವಿದ್ಯಾರ್ಥಿಗಳ ಪೋಷಕರಿಂದ ಮೊಟ್ಟೆ ತಿನ್ನುವ ಇಲ್ಲವೇ ಬಾಳೆಹಣ್ಣು ತಿನ್ನುವ ಬಗ್ಗೆ ಅನುಮತಿ ಪತ್ರವನ್ನು ಪಡೆಯುತ್ತೇವೆ. ಕೆಲವು ಮಕ್ಕಳಿಗೆ ಮೊಟ್ಟೆ ತಿನ್ನುವುದಕ್ಕೆ ಪೋಷಕರಿಂದ ವಿರೋಧವಿದೆ ಎಂದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಕೆಲವು ಭಾಗಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಇರುವುದರಿಂದ ಮೊಟ್ಟೆ ವಿತರಣೆ ಮಾಡುವಂತೆಯೂ ಶಿಕ್ಷಣ ತಜ್ಞರು ಮತ್ತು ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಅಂತಿಮವಾಗಿ ಪೋಷಕರ ವಿವೇಚನೆಗೆ ಬಿಡುತ್ತೇವೆ ಎಂದರು.