ರಾಮನಗರ, ಜೂ.11- ಬೆಂಗಳೂರು ದಕ್ಷಿಣ ಜಿಲ್ಲೆಯ ಗುಲ್ಲಹಟ್ಟಿ ಕಾವಲು ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಾಗೂ ಸಾಹಿತಿ ಡಾ. ಸತ್ಯಮೂರ್ತಿ, ಗೂಗಿ ಅವರ ಮನೆಯ ಮೇಲೆ ಒಂಟಿ ಆನೆ ರಾತ್ರಿ ಏಕಾಏಕಿ ದಾಳಿ ನಡೆಸಿದೆ.
ರಾತ್ರಿ 12 ಗಂಟೆಗೆ ಏಕಾಏಕಿ ದಾಳಿ ಮಾಡಿದ ಆನೆ ಕಾಂಪೌಂಡನ್ನು ಮುರಿದು ಹಾಕಿ, ಕೇಬಲ್ ವೈರನ್ನ ಕಿತ್ತುಹಾಕಿ, ಪಕ್ಕದ ಮನೆಯವರ ಜಾಗದಲ್ಲಿ ಇದ್ದ ಬಾಳೆಗೊನೆ, ಹಾಗೂ ಹಲಸಿನ ಹಣ್ಣನ್ನು ತಿಂದು ರಾತ್ರಿ 1ರಿಂದ 5 ಗಂಟೆಯವರೆಗೆ ಜಾಗವನ್ನು ಬಿಟ್ಟು ಕದಲದೆ ಒಂಟಿ ಆನೆ ಮನೆಯ ಮುಂದೆಯೇ ಬೀಡು ಬಿಟ್ಟಿರುವುದನ್ನು ಗಮನಿಸಿದ ಸಾರ್ವಜನಿಕರು ಶಬ್ದ ಮಾಡಿ ಎಷ್ಟೇ ಪಟಾಕಿ ಹೊಡೆದರೂ ಅಲ್ಲಿಂದ ಕದಲದೇ ನಾಲ್ಕೈದು ಗಂಟೆಗಳ ಕಾಲ ಜನರಲ್ಲಿ ಆತಂಕ ಮತ್ತು ಭಯ ಭೀತಿಯನ್ನು ಸೃಷ್ಟಿಸಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ :
ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯ ಕೋರಿ ಸತತ ನಾಲ್ಕು ಗಂಟೆಗಳ ಕಾಲ ಫೋನ್ ಮಾಡಿದರೂ ಒಬ್ಬರೂ ಕೂಡ ಫೋನ್ ಕರೆಗೆ ಉತ್ತರಿಸದೆ ನಿರ್ಲಕ್ಷ್ಯ ಮೆರೆದಿದ್ದಾರೆ. ನಮ ಪ್ರಾಣಕ್ಕೆ ತೊಂದರೆಯಾದರೆ ಯಾರನ್ನು ಪ್ರಶ್ನಿಸುವುದು ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.
