ನವದೆಹಲಿ,ಜೂ.11-ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ ವಿವಿಧ ಮಾದರಿಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಿದೆ.ಹಣಕಾಸು ಸಚಿವಾಲಯ ಇಂದು ಬೆಳಿಗ್ಗೆ ಹೊರಡಿಸಿದ ಅಧಿಸೂಚನೆಯಲ್ಲಿ ಈ ಮಾಹಿತಿ ತಿಳಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಕ್ರಮವಾಗಿ ಶೇ.22, ಶೇ.25, ಶೇ.27 ಮತ್ತು ಶೇ.30 ಎಥೆನಾಲ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೂನ್ಯ (ನಿಲ್)ಎಂದು ಘೋಷಿಸಲಾಗಿದೆ. ಗ್ರಾಹಕರು ಹೆಚ್ಚು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಮುಂದಾಗುವಂತೆ ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮೇ ತಿಂಗಳ ದ್ವಿತೀಯಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ಸುಮಾರು 7.50ರಷ್ಟು ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವ ಪಡೆದಿದೆ. ಇದಕ್ಕೂ ಮೊದಲು, ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮ ಜಾಗತಿಕ ಕಚ್ಚಾತೈಲ ಬೆಲೆ ಏರಿಕೆಯಿಂದ ದೇಶೀಯ ಗ್ರಾಹಕರಿಗೆ ಆಗುವ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10ರೂಕಡಿತಗೊಳಿಸಿತ್ತು. ಇದರಿಂದ ಸರ್ಕಾರವು ವಾರ್ಷಿಕವಾಗಿ 1 ಲಕ್ಷ ಕೋಟಿಗೂ ಅಧಿಕ ಆದಾಯವನ್ನು ತಗ್ಗಿದೆ.
ಎಥೆನಾಲ್ ಮಿಶ್ರಿತ ಇಂಧನ ಬಳಕೆಯನ್ನು ಉತ್ತೇಜಿಸುವ ಮೂಲಕ ಕಚ್ಚಾತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಪರಿಸರ ಮಾಲಿನ್ಯ ತಗ್ಗಿಸುವುದು ಹಾಗೂ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
