Homeರಾಜ್ಯರಾಜ್ಯಾದ್ಯಂತ ಇಂದಿನಿಂದ 4 ದಿನಗಳ ಕಾಲ ಪಕ್ಷಿ ಗಣತಿ

ರಾಜ್ಯಾದ್ಯಂತ ಇಂದಿನಿಂದ 4 ದಿನಗಳ ಕಾಲ ಪಕ್ಷಿ ಗಣತಿ

ಬೆಂಗಳೂರು, ಅ.30- ದೀಪಾವಳಿಯ ಸಂದರ್ಭದಲ್ಲಿ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಬೇಕು ಮತ್ತು ಸುಪ್ರೀಂಕೋರ್ಟ್‌ನ ನಿರ್ದೇಶಗಳನ್ನು ಪಾಲಿಸಬೇಕೆಂದು ಪರಿಸರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ನಿರ್ದೇಶನದ ಪ್ರಕಾರ ರಾತ್ರಿ 8 ರಿಂದ 10ಗಂಟೆ ನಡುವೆ ಮಾತ್ರ ಪಟಾಕಿ ಸಿಡಿಸಬೇಕು. ಹಸಿರು ಪಟಾಕಿಗಳನ್ನೇ ತಯಾರಿಸಬೇಕು, ಮಾರಾಟ ಮಾಡಬೇಕು ಮತ್ತು ಬಳಸಬೇಕು ಎಂದು ಸೂಚಿಸಿದರು.

ಈ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಅಪಾರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದು ಅವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸರಿಗೆ ನಿರ್ದೇಶಗಳನ್ನು ನೀಡಲಿದ್ದಾರೆ. ಪರಿಸರ ರಕ್ಷಣೆ, ಪ್ರಾಣಿ ಪಕ್ಷಗಳಿಗೆ ಹಾನಿಯಾಗುವುದು, ತಡೆಯುವುದು ಸೇರಿದಂತೆ ಸುಮಾರು 10 ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುವುದಾಗಿ ಹೇಳಿದರು.

ದೀಪಾವಳಿ ಹಿಂದೂಗಳ ಹಬ್ಬ. ಅಲ್ಲಿ ಪಟಾಕಿಗಳನ್ನು ಹೊಡೆಯುವುದನ್ನು ನಿರ್ಬಂಧಿಸಲಾಗುವುದಿಲ್ಲ. ಆದರೆ ಕಡಿಮೆ ಪ್ರಮಾಣದ ಪಟಾಕಿ ಹೊಡೆಯಬೇಕು ಮತ್ತು ಪರಿಸರ ರಕ್ಷಣೆಗೆ ಅದ್ಯತೆ ನೀಡಬೇಕೆಂದು ಸಲಹೆ ನೀಡಿದರು.ಗಣೇಶೋತ್ಸವ ಸಂದರ್ಭಲ್ಲಿ ಪ್ಲಾಸ್ಟ್‌ ಆಪ್‌ ಪ್ಯಾರಿಸ್‌‍ ಗಣೇಶ ಮೂರ್ತಿಗಳ ತಯಾರಿಕೆಗೆ ಕಡಿವಾಣ ಹಾಕಲಾಗಿತ್ತು. ಮುಂದಿನ ವರ್ಷದಿಂದ ಪರಿಸರ ಮಾಲಿನ್ಯ ನಿಯಂತ್ರಣದಿಂದಲೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸುವುದಾಗಿ ಹೇಳಿದರು.

ದೇಶಾದ್ಯಂತ ನವೆಂಬರ್‌ 2ರಿಂದ ಪಕ್ಷಿಗಳ ಗಣತಿಕಾರ್ಯ ನಡೆಯಲಿದೆ. ಬರ್ಡ್‌ ಕೌಂಟ್‌ ಇಂಡಿಯಾ (ಬಿಸಿಐ) ಹಾಗೂ ಕೆಬಿಎಂಎನ್‌ (ಕೆಬಿಎಂಎನ್‌) ಸಹಭಾಗಿತ್ವದಲ್ಲಿ ಈ ಗಣತಿ ಕಾರ್ಯ ನಡೆಯಲಿದೆ. ಪಕ್ಷಿ ವೀಕ್ಷಕರ ಗುಂಪುಗಳು, ಸಂಶೋಧಕರು ಹಾಗೂ ಸಂರಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ ಎಷ್ಟು ಪಕ್ಷಿಗಳಿವೆ ಹಾಗೂ ಯಾವೆಲ್ಲ ಪ್ರಭೇದದ ಪಕ್ಷಿಗಳು ಕಂಡುಬರುತ್ತವೆ ಎಂಬುದನ್ನು ಗುರುತಿಸುವುದು ಈ ಗಣತಿಯ ಪ್ರಮುಖ ಉದ್ದೇಶವಾಗಿದೆ. ಗಣತಿ ಪೂರ್ಣಗೊಳ್ಳುವ ಮುನ್ನ ರಾಜ್ಯದಲ್ಲಿರುವ ಪಕ್ಷಿಗಳ ನಿಖರ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಅಂದಾಜಿನ ಆಧಾರದ ಮೇಲೆ ಮಾತ್ರ ಮಾಹಿತಿ ನೀಡಬಹುದು ಎಂದು ಸ್ಪಷ್ಟಪಡಿಸಿದರು.

ಇಂದಿನಿಂದ ಆರಂಭವಾಗಿರುವ ಗಣತಿ ಕಾರ್ಯ ನವೆಂಬರ್‌ 2ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಪಕ್ಷಿಗಳ ಸಂಖ್ಯೆ, ಅವುಗಳ ಪ್ರಭೇದಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಗಣತಿ ಪೂರ್ಣಗೊಂಡ ಬಳಿಕ ಸಂಗ್ರಹಿಸಿದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳು ಮಹತ್ವದ ಪಾತ್ರ ವಹಿಸುತ್ತವೆ. ಪಕ್ಷಿಗಳ ಪ್ರಭೇದ ಹಾಗೂ ಅವುಗಳ ಅಸ್ತಿತ್ವದ ಕುರಿತು ಮಾಹಿತಿ ಸಂಗ್ರಹಿಸುವುದರಿಂದ ಜೀವವೈವಿಧ್ಯದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಮತ್ತು ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ.ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ನೈಸರ್ಗಿಕ ಸಂಪತ್ತು ಹಾಗೂ ಪರಿಸರದ ಮಹತ್ವವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪಕ್ಷಿ ಗಣತಿ ಕಾರ್ಯಕ್ರಮ ಮಹತ್ವ ಪಡೆದಿದೆ.

RELATED ARTICLES

Latest News