Homeರಾಜ್ಯನಾಳೆಯಿಂದ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ರೈಲು ಸೇವೆ

ನಾಳೆಯಿಂದ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ರೈಲು ಸೇವೆ

ಬೆಂಗಳೂರು,ಅ.31- ರಾಜಧಾನಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ನ. 1 (ನಾಳೆ)ರಂದು ಈ ನೂತನ ರೈಲಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಲಾಗುತ್ತಿದೆ.

ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌‍ಎಂವಿಟಿ) ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ 9.45ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳ ನಡುವಿನ ದೂರದ ಪ್ರಯಾಣಕ್ಕೆ ಹೊಸ ರೈಲು ಸಂಪರ್ಕ ಸೇರ್ಪಡೆಯಾಗಲಿದೆ.

ವಿಶೇಷ ಸಮಾರಂಭದಲ್ಲಿ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್‌ ಅವರು SMVT ಬೆಂಗಳೂರು- ಸಿಎಸ್‌‍ಎಂಟಿ ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

ಈ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಪ್ರಮುಖ ನಾಯಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.ಕೇಂದ್ರ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ್‌ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ. ಮೋಹನ್‌, ಕೃಷ್ಣ ಬೈರೇಗೌಡ, ತೇಜಸ್ವಿ ಸೂರ್ಯ, ಡಾ. ಸಿ.ಎನ್‌. ಮಂಜುನಾಥ್‌, ಲಹರ್‌ ಸಿಂಗ್‌ ಸಿರೋಯಾ, ಜಿ.ಸಿ. ಚಂದ್ರಶೇಖರ್‌, ಜಗ್ಗೇಶ್‌ ಹಾಗೂ ಸ್ಥಳೀಯ ಶಾಸಕರಾದ ಎಸ್‌‍. ರಘು ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.

ಸುಮಾರು 16 ಗಂಟೆಗಳ ಪ್ರಯಾಣ :
ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣವನ್ನು ಹೆಚ್ಚು ಆರಾಮ ದಾಯಕ ಹಾಗೂ ವೇಗವಾಗಿಸುವ ಉದ್ದೇಶದಿಂದ ಈ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆಯನ್ನು ಪರಿಚಯಿಸಲಾಗುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ರೈಲು ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸಲಿದ್ದು, ಮಾರ್ಗಮಧ್ಯೆ ಎಂಟು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಪ್ರಸ್ತುತ ರೈಲು ಪ್ರಯಾಣಕ್ಕೆ ಹೋಲಿಸಿದರೆ ಸುಮಾರು ನಾಲ್ಕು ಗಂಟೆಗಳವರೆಗೆ ಪ್ರಯಾಣದ ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ.

RELATED ARTICLES

Latest News