ಬೆಂಗಳೂರು, ಅ.31- ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಾಳೆ ಹಿಂದೂಸ್ಥಾನ್ ಮಷಿನ್ ಟೂಲ್ಸ್ ವತಿಯಿಂದ ಹೆಚ್ಎಂಟಿ ಕನ್ನಡಿಗ ಕೈಗಡಿಯಾರಗಳ ಲೋಕಾರ್ಪಣೆ ಮಾಡಲಾಗುತ್ತದೆ. ಜಾಲಹಳ್ಳಿಯ ಹೆಚ್ಎಂಟಿ ಆಟದ ಮೈದಾನದಲ್ಲಿ ನಾಳೆ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ವಿನ್ಯಾಸದ ಹೆಚ್ಎಂಟಿ ಕನ್ನಡಿಗ ಕೈಗಡಿಯಾರವನ್ನು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಭಾಗವಹಿಸಲಿದ್ದಾರೆ.
ಕನ್ನಡ ನಾಡುನುಡಿ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿ ಈ ನೆಲದ ಒಡಲಾಳದ ದನಿಯಾಗಿರುವ ಹೆಚ್ಎಂಟಿಯು ವಿನೂತನವಾಗಿ ತಯಾರಿಸಿರುವ ನೂತನ ಕೈಗಡಿಯಾರವು ಕನ್ನಡಿಗರ ಹೆಮೆಯ ಪ್ರತೀಕವಾಗಿದೆ ಎಂದು ಹೇಳಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಹೆಚ್ಎಂಟಿ ಕೈಗಡಿಯಾರಗಳಿಗೆ ಭಾರಿ ಬೇಡಿಕೆಯುಂಟಾಗಿತ್ತು. ಹೆಚ್ಎಂಟಿಯ ಮರಾಟ ಮಳಿಗೆಗಳ ಮುಂದೆ ಕೈಗಡಿಯಾರ ಖರೀದಿಸಲು ಗ್ರಾಹಕರು ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು.
