ಬೆಂಗಳೂರು, ಅ.31- ನಗರದ ಆಸ್ತಿ ಮಾಲೀಕರಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನವನ್ನು ಪುನರಾರಂಭಿಸಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 62 ಸಹಾಯಕ ಕಂದಾಯ ಅಧಿಕಾರಿ (ಎಆರ್ಒ) ಕಚೇರಿಗಳಲ್ಲಿ ಈ ಮೇಳ ನಡೆಯಲಿದ್ದು, ನಾಗರಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಇ-ಖಾತಾ ಸೇವೆಗಳನ್ನು ಪಡೆದುಕೊಳ್ಳಬಹುದು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ನಿರ್ದೇಶನದ ಮೇರೆಗೆ ಅಭಿಯಾನವನ್ನು ಮರು ಆರಂಭಿಸಲಾಗುತ್ತಿದೆ. ಇ-ಖಾತಾ ಪಡೆಯುವುದು, ಹೊಸ ಖಾತೆ ಮಾಡಿಸಿಕೊಳ್ಳುವುದು ಹಾಗೂ ಖಾತಾಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾಗರಿಕರಿಗೆ ಈ ಅಭಿಯಾನ ನೆರವಾಗಲಿದೆ. ನಾಗರಿಕರು ತಮ್ಮ ಸಮೀಪದ ಅಭಿಯಾನದ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವತಃ ಅರ್ಜಿ ಸಲ್ಲಿಸಲು ಅವಕಾಶ:
ಇ-ಖಾತಾ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯುವ ಬದಲು ನಾಗರಿಕರೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಜಿಬಿಎ ಉತ್ತೇಜಿಸುತ್ತಿದೆ. ಇ-ಖಾತಾ ಸೇವೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಜಿಬಿಎಯ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸಿ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳಬಹುದು. ಬಳಿಕ ಜಿಬಿಎಯ ಇ-ಆಸ್ತಿ ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇ-ಖಾತಾ ಕುರಿತ ಹೆಚ್ಚಿನ ಮಾಹಿತಿಗಾಗಿ ಆಯಾ ನಗರ ಪಾಲಿಕೆಗಳ ಕಂದಾಯ ವಿಭಾಗದ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
