ನವದೆಹಲಿ, ಅ.30- ದೇಶದಲ್ಲಿ ಬೌದ್ಧಿಕ ನಕ್ಸಲರು (ದಿಮಾಗಿ ನಕ್ಸಲರು) ಎಂದು ಗುರುತಿಸಲಾದ ವ್ಯಕ್ತಿಗಳು ಮತ್ತು ಸಂಘಟನೆಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಶೂನ್ಯ (ನಿಲ್) ಎಂಬ ಉತ್ತರ ನೀಡಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ-2005ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ದೇಶದಲ್ಲಿ ಎಷ್ಟು ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಬೌದ್ಧಿಕ ನಕ್ಸಲರು ಎಂದು ಗುರುತಿಸಲಾಗಿದೆ ಎಂಬ ವಿವರಗಳನ್ನು ಕೇಳಿದ್ದರು.
2026ರ ಅಕ್ಟೋಬರ್ 8ರಂದು ಸ್ವೀಕರಿಸಲಾದ ಈ ಅರ್ಜಿಗೆ ಅಕ್ಟೋಬರ್ 28ರಂದು ಉತ್ತರಿಸಿರುವ ಗೃಹ ಸಚಿವಾಲಯದ ಎಡಪಂಥೀಯ ಉಗ್ರವಾದ ವಿಭಾಗದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಕೇಳಲಾದ ಮಾಹಿತಿಯು ತಮ ವಿಭಾಗದ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುವ ದಾಖಲೆಗಳಲ್ಲಿ ಲಭ್ಯವಿಲ್ಲ. ಹೀಗಾಗಿ ತಮ ವಿಭಾಗದ ಮಟ್ಟಿಗೆ ಉತ್ತರವನ್ನು ಶೂನ್ಯ ಎಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 6(3)ರ ಅಡಿಯಲ್ಲಿ ಅರ್ಜಿಯನ್ನು ಗೃಹ ಸಚಿವಾಲಯದ ಇತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ವರ್ಗಾಯಿಸಲಾಗಿದ್ದು, ಅವರ ಬಳಿ ಮಾಹಿತಿ ಲಭ್ಯವಿದ್ದರೆ ನೇರವಾಗಿ ಅರ್ಜಿದಾರರಿಗೆ ಒದಗಿಸುವಂತೆ ಕೋರಲಾಗಿದೆ.
