Homeರಾಜ್ಯರಾಜ್ಯದಲ್ಲಿ ಬಿಸಿತುಪ್ಪವಾದ ಗ್ಯಾರಂಟಿಗಳು, ಸಾಲು ಸಾಲು ಬೆಲೆ ಏರಿಕೆಗೆ ಭಾರಿ ಜನಾಕ್ರೋಶ

ರಾಜ್ಯದಲ್ಲಿ ಬಿಸಿತುಪ್ಪವಾದ ಗ್ಯಾರಂಟಿಗಳು, ಸಾಲು ಸಾಲು ಬೆಲೆ ಏರಿಕೆಗೆ ಭಾರಿ ಜನಾಕ್ರೋಶ

ಬೆಂಗಳೂರು,ಅ.30- ಒಂದೆಡೆ ಕಲ್ಯಾಣ ರಾಜ್ಯದ ಕನಸು ಬಿತ್ತಿ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಸರೆಯಾಗಲು ಹೊರಟಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ದಿನೋಪಯೋಗಿ ವಸ್ತುಗಳು ಹಾಗೂ ಸಾರ್ವಜನಿಕ ಸೇವೆಗಳ ದರವನ್ನು ಸತತವಾಗಿ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ನವೆಂಬರ್‌ ತಿಂಗಳ ಆರಂಭದಿಂದಲೇ ಸಾಲು ಸಾಲು ಬೆಲೆ ಏರಿಕೆಗಳ ಬಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ರಾಜ್ಯದ ಜನತೆ ಅಕ್ಷರಶಃ ದುಬಾರಿ ದುನಿಯಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

  1. ಹಾಲು ದರ ಏರಿಕೆ :
    ರಾಜ್ಯದಲ್ಲಿ ನವೆಂಬರ್‌ 1ರಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್‌ ಹಾಲಿನ ದರವನ್ನು 8 ರೂಪಾಯಿಗಳವರೆಗೆ ಏರಿಕೆ ಮಾಡುವ ತೀರ್ಮಾನವು ಹೈನುಗಾರರಿಗೆ ತುಸು ನೆಮದಿ ನೀಡಿದರೂ, ಗ್ರಾಹಕರ ಜೇಬಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಈಗಾಗಲೇ ತರಕಾರಿ, ಅಡುಗೆ ಎಣ್ಣೆ, ಅನಿಲ ಹಾಗೂ ಇಂಧನ ಬೆಲೆಯಿಂದ ಕಂಗೆಟ್ಟಿರುವ ಜನರಿಗೆ ಹಾಲಿನ ದರ ಏರಿಕೆಯು ಬಿಸಿ ತುಪ್ಪವಾಗಿ ಪರಿಣಮಿಸಿದೆ.
  2. ಬಸ್‌‍ ಪ್ರಯಾಣ ದರ ಹೆಚ್ಚಳದ ಭೀತಿ :
    ಇಂಧನ ಬೆಲೆ ಏರಿಕೆ ಹಾಗೂ ಸಾರಿಗೆ ನಿಗಮಗಳ ನಷ್ಟದ ನೆಪವೊಡ್ಡಿ ನವೆಂಬರ್‌ 4ರಿಂದ ಸಾರಿಗೆ ಬಸ್‌‍ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಕೆಎಸ್‌‍ಆರ್‌ಟಿಸಿ ಹಾಗೂ ಇತರೆ ಸಾರಿಗೆ ಸಂಸ್ಥೆಗಳು ದರ ಪರಿಷ್ಕರಣೆಗೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಬಸ್‌‍ ಪ್ರಯಾಣ ದರ ಏರಿಕೆಯಾದರೆ ನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಬಡ ವರ್ಗದ ಜನರಿಗೆ ದೊಡ್ಡ ಆಘಾತವಾಗಲಿದೆ.
  3. ತಿಂಡಿ, ಕಾಫಿ, ಟೀ ದರ ಕೂಡ ಅಧಿಕ :
    ಹಾಲಿನ ದರ ಹಾಗೂ ಸಾರಿಗೆ ವೆಚ್ಚ ಹೆಚ್ಚಾಗುತ್ತಿದ್ದಂತೆ, ಇದರ ನೇರ ಪರಿಣಾಮ ಹೋಟೆಲ್‌ ಉದ್ಯಮದ ಮೇಲೆ ಬೀರಿದೆ. ಹೋಟೆಲ್‌ ಹಾಗೂ ಉಪಾಹಾರ ಮಂದಿರಗಳಲ್ಲಿ ಕಾಫಿ, ಟೀ, ತಿಂಡಿ ಮತ್ತು ಊಟದ ಬೆಲೆಗಳು ಗಗನಕ್ಕೇರುವ ಸಂಭವವಿದ್ದು, ದಿನನಿತ್ಯ ಹೋಟೆಲ್‌ ಅವಲಂಬಿಸಿರುವ ಮಧ್ಯಮ ವರ್ಗದ ನೌಕರರು ಹಾಗೂ ವಿದ್ಯಾರ್ಥಿಗಳ ತಿಂಗಳು ಅಂತ್ಯದ ಬಜೆಟ್‌ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ.

ಗ್ಯಾರಂಟಿ ಯೋಜನೆಗಳ ಲಾಭ ಒಂದೆಡೆ, ಬೆಲೆ ಏರಿಕೆಯ ಹೊರೆ ಮತ್ತೊಂದೆಡೆ! :
ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್‌‍ ಪ್ರಯಾಣ ಹಾಗೂ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಹಣಕಾಸಿನ ನೆರವು ದೊರೆಯುತ್ತಿದೆ.

ಆದರೆ ಮತ್ತೊಂದೆಡೆ ಹಾಲಿನ ದರ ಏರಿಕೆ, ಸಾರಿಗೆ ದರ ಪರಿಷ್ಕರಣೆಯ ಪ್ರಸ್ತಾಪ ಮತ್ತು ಹೋಟೆಲ್‌ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಸಾಧ್ಯತೆ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.ಸರ್ಕಾರ ಒಂದು ಕೈಯಲ್ಲಿ ಹಣ ನೀಡುತ್ತಾ ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಮೂಲಕ ಅದಕ್ಕಿಂತ ಹೆಚ್ಚಿನ ಹಣವನ್ನು ಜನರಿಂದ ವಸೂಲಿ ಮಾಡುತ್ತಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಾಜ್ಯದಲ್ಲಿ ಹಾಲಿನ ದರವನ್ನು 2025ರ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ 4 ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು 2024ರ ಜೂನ್‌ನಲ್ಲಿ ಹಾಲಿನ ಪ್ಯಾಕೆಟ್‌ ಪ್ರಮಾಣದ ಬದಲಾವಣೆಯೊಂದಿಗೆ ದರ ಪರಿಷ್ಕರಣೆಯಾಗಿತ್ತು. ಇದೀಗ ಮತ್ತೆ 8ರಷ್ಟು ಹೆಚ್ಚಳವಾಗುತ್ತಿರುವುದು ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ. ಇದೇ ರೀತಿ ಸಾರಿಗೆ ದರವನ್ನು 2025ರಲ್ಲಿ ಶೇ.15ರಷ್ಟು ಹೆಚ್ಚಿಸಲಾಗಿತ್ತು. ಈ ಹಿಂದಿನ ದರ ಏರಿಕೆಗಳ ಪರಿಣಾಮ ಜನರ ದಿನನಿತ್ಯದ ಖರ್ಚಿನಲ್ಲಿ ಈಗಾಗಲೇ ಕಾಣಿಸಿಕೊಳ್ಳುತ್ತಿರುವಾಗ ಮತ್ತೊಂದು ಸುತ್ತಿನ ಏರಿಕೆಯ ಪ್ರಸ್ತಾಪ ಆತಂಕ ಮೂಡಿಸಿದೆ.

ಸರ್ಕಾರದ ಈ ಸರಣಿ ಬೆಲೆ ಏರಿಕೆಯ ತೀರ್ಮಾನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಮುಖಾಂತರ ಉಚಿತ ಸೌಲಭ್ಯಗಳನ್ನು ನೀಡಿ ಜನಪ್ರಿಯತೆ ಗಳಿಸುತ್ತಿರುವ ಸರ್ಕಾರ, ಮತ್ತೊಂದು ಕಡೆ ಪರೋಕ್ಷವಾಗಿ ಇಂಧನ, ಹಾಲು, ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ವಿಪರೀತವಾಗಿ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ.

ಬರುವ ದಿನಗಳಲ್ಲಿ ಸರ್ಕಾರವು ಈ ಬೆಲೆ ಏರಿಕೆಗಳ ಕುರಿತು ಮರುಚಿಂತನೆ ನಡೆಸಿ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಜನಸಾಮಾನ್ಯರ ಆಕ್ರೋಶ ಮತ್ತಷ್ಟು ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಬೆಲೆ ನಿಯಂತ್ರಣವೂ ಇರಲಿ :
ಸರ್ಕಾರ ಯಾವುದೇ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದರೂ ಅದರ ಅಂತಿಮ ಉದ್ದೇಶ ಜನರ ಜೀವನಮಟ್ಟ ಸುಧಾರಿಸುವುದಾಗಿರಬೇಕು. ರೈತರಿಗೆ ನ್ಯಾಯಯುತ ಬೆಲೆ ನೀಡುವುದು, ಸಾರಿಗೆ ಸಂಸ್ಥೆಗಳನ್ನು ನಷ್ಟದಿಂದ ಹೊರತರುವುದು ಹಾಗೂ ಹಾಲು ಉತ್ಪಾದಕರ ಹಿತ ಕಾಯುವುದು ಅಗತ್ಯವೇ ಸರಿ. ಆದರೆ ಅದೇ ಸಮಯದಲ್ಲಿ ಗ್ರಾಹಕರ ಮೇಲಿನ ಹೊರೆಯನ್ನು ನಿಯಂತ್ರಿಸುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವು ನೀಡುತ್ತಿರುವ ಸರ್ಕಾರ, ಬೆಲೆ ಏರಿಕೆಯ ಹೊರೆ ಕಡಿಮೆ ಮಾಡುವಲ್ಲಿಯೂ ತನ್ನ ಜವಾಬ್ದಾರಿ ನಿಭಾಯಿಸಬೇಕಿದೆ. ಇಲ್ಲದಿದ್ದರೆ ಜನರಿಗೆ ಸಿಗುವ ಸೌಲಭ್ಯಗಳ ಲಾಭವನ್ನು ದಿನನಿತ್ಯದ ಬೆಲೆ ಏರಿಕೆಯೇ ನುಂಗಿಹಾಕುವ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರ ಪಾಲಿಗೆ ಗ್ಯಾರಂಟಿಗಳ ಸಂತೋಷಕ್ಕಿಂತ ದುಬಾರಿ ದುನಿಯಾದ ಸಂಕಷ್ಟವೇ ದೊಡ್ಡದಾಗುವ ಆತಂಕ ಎದುರಾಗಿದೆ.

RELATED ARTICLES

Latest News