Homeರಾಷ್ಟ್ರೀಯಖಾಸಗೀಕರಣದ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿದ ರಾಹುಲ್‌ ಗಾಂಧಿಗೆ ಕೃತಜ್ಞತೆ ಸಲ್ಲಿಸಿದ ಐಡಿಬಿಐ ಬ್ಯಾಂಕ್‌

ಖಾಸಗೀಕರಣದ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿದ ರಾಹುಲ್‌ ಗಾಂಧಿಗೆ ಕೃತಜ್ಞತೆ ಸಲ್ಲಿಸಿದ ಐಡಿಬಿಐ ಬ್ಯಾಂಕ್‌

ನವದೆಹಲಿ, ಅ.30- ಐಡಿಬಿಐ ಬ್ಯಾಂಕ್‌ ಖಾಸಗೀಕರಣದ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರಿಗೆ ಐಡಿಬಿಐ ಬ್ಯಾಂಕ್‌ ಅಧಿಕಾರಿಗಳ ಸಂಘಟನೆ ಬಿಹಾರ ಮತ್ತು ಜಾರ್ಖಂಡ್‌ ಶಾಖೆ ಕೃತಜ್ಞತೆ ಸಲ್ಲಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಂಘಟನೆ, ಐಡಿಬಿಐ ಬ್ಯಾಂಕ್‌ ಕುಟುಂಬದ ಪರವಾಗಿ ರಾಹುಲ್‌ ಗಾಂಧಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದೆ.

ಬ್ಯಾಂಕ್‌ ನೌಕರರ ನ್ಯಾಯಸಮತ ಬೇಡಿಕೆಗಳು ಮತ್ತು ಹಿತಾಸಕ್ತಿಗಳ ಪರವಾಗಿ ನಿಂತು ಬೆಂಬಲ ನೀಡಿರುವುದು ನೌಕರರ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಹೇಳಿದೆ.
ಐಡಿಬಿಐ ಬ್ಯಾಂಕ್‌ ಕೇವಲ ಒಂದು ಬ್ಯಾಂಕ್‌ ಅಲ್ಲ. ಅದು ರಾಷ್ಟ್ರ ನಿರ್ಮಾಣದ ಪರಂಪರೆ, ಸಾರ್ವಜನಿಕರ ವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂಕೇತವಾಗಿದೆ. ಜನರ ಹಣದಿಂದ ಬಂಡವಾಳ ಹೊಂದಿರುವ ಈ ಸಂಸ್ಥೆಯ ಭವಿಷ್ಯದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವಾಗ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ತಮ ಹೋರಾಟ ಕೇವಲ ಉದ್ಯೋಗ ಭದ್ರತೆಗೆ ಸೀಮಿತವಾಗಿಲ್ಲ. ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ವ್ಯವಸ್ಥೆ, ಸಾಮಾಜಿಕ ನ್ಯಾಯ ಹಾಗೂ ದೇಶದ ಕೋಟ್ಯಂತರ ಜನರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶವನ್ನೂ ಹೊಂದಿದೆ ಎಂದು ಸ್ಪಷ್ಟಪಡಿಸಿದೆ.

ಐಡಿಬಿಐ ಬ್ಯಾಂಕಿನ ಖಾಸಗೀಕರಣವನ್ನು ತಡೆಯುವುದು ಮತ್ತು ಅದರ ಸಾರ್ವಜನಿಕ ಸ್ವರೂಪ ಹಾಗೂ ಜನಸೇವೆಯ ಆಶಯವನ್ನು ಉಳಿಸಿಕೊಳ್ಳುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ಹೋರಾಟಕ್ಕೆ ರಾಹುಲ್‌ ಗಾಂಧಿ ಅವರ ಬೆಂಬಲ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಐಡಿಬಿಐ ಬ್ಯಾಂಕನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಐಡಿಬಿಐ ಬ್ಯಾಂಕ್‌ ಮಾರಾಟಕ್ಕಿಲ್ಲ ಎಂದು ಘೋಷಿಸಿರುವ ಸಂಘಟನೆ, ಬ್ಯಾಂಕ್‌ ಉಳಿಸಿ, ದೇಶ ಉಳಿಸಿ ಎಂಬ ಆಶಯದೊಂದಿಗೆ ಖಾಸಗೀಕರಣವನ್ನು ವಿರೋಧಿ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದೆ.

RELATED ARTICLES

Latest News