ಕನಕಪುರ,ಜ.14- ಗುಂಡಿಗೆ ಬಿದ್ದಿದ್ದ ಆನೆ ಮರಿಯನ್ನು ಗ್ರಾಮಸ್ಥರ ಸಹಾಯದಿಂದ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ನಡೆದಿದೆ. ಕಬ್ರಿಯ ಅರಣ್ಯ ವ್ಯಾಪ್ತಿಯ ರಂಗಪ್ಪನ ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರ ಸಮಯಪ್ರಜ್ಞೆ ಹಾಗೂ ಔದಾರ್ಯವನ್ನು ಅರಣ್ಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನೆ ಹಿಂಡಿನಿಂದ ಬೇರ್ಪಟ್ಟು ಮರಿಯಾನೆ ಅರಣ್ಯದಂಚಿನಲ್ಲಿರುವ ರಂಗಪ್ಪದೊಡ್ಡಿ ಗ್ರಾಮದ ಸಮೀಪದ ಹಳ್ಳದಲ್ಲಿ ಬಿದ್ದಿತ್ತು. ಇದರ ತಾಯಿ ಆನೆ, ಮತ್ತೊಂದು ಸಲಗ ಮರಿಯಾನೆಯನ್ನು ಮೇಲೆತ್ತಲು ಹರಸಾಹಸಪಟ್ಟಿದ್ದವು. ಮೇಲೇತ್ತಲು ಸಾಧ್ಯವಾಗದಿದ್ದಾಗ ಗೀಳಿಡುತ್ತಿದ್ದವು.
ಆನೆ ಘರ್ಜನೆ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಹಳ್ಳದಲ್ಲಿ ಆನೆ ಮರಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಇಲಾಖೆ ಸಿಬ್ಬಂದಿಗಳು ಜೆಸಿಬಿಯನ್ನು ತಂದು ಕಾರ್ಯಾಚರಣೆಗಿಳಿದಾಗ ಎರಡು ಆನೆಗಳು ದೂರದಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಕಾರ್ಯಾಚರಣೆಗೆ ಅವಕಾಶ ನೀಡಿ ಮಧ್ಯರಾತ್ರಿ 1 ಗಂಟೆ ಯವರೆಗೂ ಕಾದು ಮರಿಯಾನೆ ಹಳ್ಳದಿಂದ ಮೇಲಕ್ಕೆ ಬಂದಾಗ ಆ ಆನೆಗಳು ಜೋರಾಗಿ ಗೀಳಿಟ್ಟು ಕೃತಜ್ಞತೆ ಸಲ್ಲಿಸಿದವು.ಹಳ್ಳದಿಂದ ಮೇಲೆ ಬಂದ ಕೂಡಲೇ ಮರಿಯಾನೆ ತಾಯಿ ಆನೆಯತ್ತ ಓಡಿಹೋಗಿ ಮೂರು ಆನೆಗಳು ಒಟ್ಟಿಗೆ ಕಾಡು ಸೇರಿದವು.
ಗ್ರಾಮಸ್ಥರು ಈ ಘಟನೆಯಿಂದ ಕುತೂಹಲಭರಿತರಾಗಿದ್ದು ಆಗಾಗ ಆನೆ ದಾಳಿಯಿಂದ ಸಂಕಷ್ಟಕ್ಕೆ ಎದುರಾಗುತ್ತದೆ. ಆದರೆ ನಮಗೆ ಸಹಕಾರ ನೀಡಿದ ಆನೆ ಹಿಂಡು ನಮಗೆ ಆಶೀವರ್ದಿಸಿ ಹೋಗಿರವುದು ನಮಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಅರಣ್ಯಾಧಿಕಾರಿ ಅಂತೋಣಿ ರೋಬೊ ಅವರು ಗ್ರಾಮಸ್ಥರ ಸಹಕಾರಕ್ಕೆ ಕೃತ್ಯಜ್ಞತೆ ಸಲ್ಲಿಸಿದ್ದಾರೆ. ಇವರ ಜೊತೆಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ರಕ್ಷಕರಾದ ಯತೀಶ್, ಶ್ರೀಕಾಂತ್, ಆನೆ ಕಾರ್ಯಪಡೆಯ ಮುತ್ತುರಾಜ್, ನಾಗೇಶ್ ಅವರನ್ನು ಅಭಿನಂದಿಸಿದ್ದಾರೆ.
