ತುಮಕೂರು,ಮೇ 7- ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಮುಂದುವರೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ತಾಲ್ಲೂಕಿನ ಕೋಳಿಹಳ್ಳಿ ಅರಣ್ಯ ಪ್ರದೇಶದಲ್ಲಿ ಆರಂಭವಾದ ನವಿಲುಗಳ ಸಾವು ಇದೀಗ ದೇವರಾಯನದುರ್ಗ ತಪ್ಪಲಿನ ದುರ್ಗದಹಳ್ಳಿ, ಹಿರೇಹಳ್ಳಿ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ ಕೆಸರುಮಡು, ಗೂಳರಿವೆ ಹಾಗೂ ಕುಣಿಗಲ್ ಸ್ಟೆಡ್ ಫಾರಂ ಸುತ್ತಮುತ್ತಲಿಗೂ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಇದುವರೆಗೂ 54 ನವಿಲುಗಳು ಸಾವನ್ನಪ್ಪಿರುವುದು ತಿಳಿದುಬಂದಿದೆ.ಏ.16 ರಂದು ಕೋಳಿಹಳ್ಳಿ ಸುತ್ತಮುತ್ತ 45ಕ್ಕೂ ಹೆಚ್ಚು ನವಿಲುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದವು. ಮೃತ ನವಿಲುಗಳ ಮಾದರಿಯನ್ನು ಪರೀಕ್ಷೆಗಾಗಿ ಬೂಪಾಲನ್‌ನ ಅಂತಾರಾಷ್ಟ್ರೀಯ ಪ್ರಯೋಗಲಾಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ನಿವಲುಗಳ ಸಾವಿಗೆ ಎಚ್5ಎನ್1 ಹಕ್ಕಿಜ್ವರ ಕಾರಣ ಎಂಬುದು ದೃಢಪಟ್ಟಿತ್ತು.
ಇದರ ಬೆನ್ನಲ್ಲೇ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಕೋಳಿಹಳ್ಳಿ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ನಿಗಾ ಪ್ರದೇಶವೆಂದು ಘೋಷಿಸಿ ತುರ್ತು ಕ್ರಮ ಕೈಗೊಂಡಿತ್ತು.ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾಮಪಂಚಾಯಿತಿಗಳನ್ನೊಳಗೊಂಡು ತುರ್ತು ಸ್ಪಂದನಾ ತಂಡವನ್ನು ರಚಿಸಲಾಗಿದ್ದು, ಸಾರ್ವಜನಿಕರು ಸತ್ತ ಪ್ರಾಣಿಗಳನ್ನು ಮುಟ್ಟಬಾರದು ಹಾಗೂ ಕೋಳಿಮಾಂಸವನ್ನು ಚೆನ್ನಾಗಿ ಬೇಯಿಸಿ ಮಾತ್ರ ಸೇವಿಸಬೇಕು ಎಂದು ಎಚ್ಚರಿಕೆ ನೀಡಲಾಗಿತ್ತು.
ಕೋಳಿಫಾರಂ ಮಾಲೀಕರಿಗೂ ಕೂಡಾ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವರಾಯನದುರ್ಗದ ದುರ್ಗದಹಳ್ಳಿ ಬಳಿ 2 ನವಿಲು, ಹಿರೇಹಳ್ಳಿಯ ಕೆವಿಕೆ ಬಳಿ 6, ಕೆಸರಮಡು ಬಳಿ 1 ನವಿಲು ಮೃತಪಟ್ಟಿರುವುದು ಪತ್ತೆಯಾಗಿದೆ. ಇದರ ಜೊತೆಗೆ ಕುಣಿಗಲ್ ಸ್ಟೆಡ್ ಫಾರಂ ಬಳಿಯೂ ಒಂದು ನವಿಲು ಮೃತಪಟ್ಟಿರುವುದು ವರದಿಯಾಗಿದೆ.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಮೃತ ನವಿಲುಗಳ ವಿಲೇವಾರಿ ಕ್ರಮ ಕೈಗೊಂಡಿದ್ದೇವೆ. ಸದ್ಯಕ್ಕೆ ಕೋಳಿ ಅಥವಾ ಇತರೆ ಸಾಕುಪ್ರಾಣಿಗಳನ್ನು ಸೋಂಕು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಎಚ್5ಎನ್1 ಸೋಂಕು ದೃಢಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ತುರ್ತು ಸಹಾಯವಾಣಿ ಸ್ಥಾಪಿಸಿದೆ.
