ಕಾರವಾರ,ಜ.7-ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾಗಿರುವ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಸೂಳೆಮುರ್ಕಿ ಕ್ರಾಸ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಮೇಲ್ನೋಟಕ್ಕೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರುವ ಸಾಧ್ಯತೆ ಕಂಡು ಬಂದಿದೆ.
ಅಪಘಾತದ ತೀವ್ರತೆಯಿಂದ ಕಾರಿನ ನಂಬರ್ ಪ್ಲೇಟ್ ಕೂಡ ಸುಟ್ಟು ಹೋಗಿರುವುದರಿಂದ ಕಾರು ಮತ್ತು ಕಾರಿನಲ್ಲಿದ್ದವರ ಗುರುತು ಸದ್ಯಕ್ಕೆ ಸಿಕ್ಕಿಲ್ಲ. ಪೊಲೀಸರು ಗುರುತು ಪತ್ತೆಗಾಗಿ ಮುಂದಾಗಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ ಕಾರಿನಲ್ಲಿದ್ದವರು ಸಿದ್ದಾಪುರ ಮೂಲದವರೆಂದು ಗೊತ್ತಾಗಿದೆ. ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಸಜೀವ ದಹನವಾಗಿರುವ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
